ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಮದ್ಯದ ಚಟಕ್ಕೆ ದಾಸರಾಗ್ತಿದ್ದಾರೆ. ಒಂದಾದ್ಮೇಲೆ ಒಂದರಂತೆ ಮಧ್ಯಪ್ರದೇಶ ಸರ್ಕಾರಿ ಶಿಕ್ಷಕರ ಮದ್ಯ ಸೇವನೆ ವಿಡಿಯೋ ವೈರಲ್ ಆಗ್ತಿದೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕಾದ ಶಿಕ್ಷಕರೇ ಈ ಸ್ಥಿತಿಯಲ್ಲಿದ್ರೆ ಮಕ್ಕಳ ಸ್ಥಿತಿ ಹೇಗೆ ಎನ್ನುವ ಪ್ರಶ್ನೆ ಈಗ ಶುರುವಾಗಿದೆ.
ಒಂದು ವೀಡಿಯೋ ಉಜ್ಜಯಿನಿ ವಿಭಾಗದ ಮಂದಸೌರ್ ಜಿಲ್ಲೆಯದ್ದು. ಇನ್ನೊಂದು ರೀವಾ ಜಿಲ್ಲೆಯ ಹೆಡ್ ಮಾಸ್ಟರ್ ವಿಡಿಯೋ. ಎರಡೂ ವಿಡಿಯೋಗಳು ವೈರಲ್ ಆದ ನಂತರ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಮಂದ್‌ಸೌರ್‌ನ ಶಿಕ್ಷಕರನ್ನು ಅಮಾನತುಗೊಳಿಸಲಾಗಿದ್ದು, ರೇವಾದ ಮುಖ್ಯೋಪಾಧ್ಯಾಯರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಮಂದಸೌರ್ ಜಿಲ್ಲೆಯ ಶಮ್‌ಗಢ ಬ್ಲಾಕ್‌ನ ಖಜುರಿ ಪಂಥ್ ಸರ್ಕಾರಿ ಶಾಲೆಯ ಶ್ಯಾಮ್ ಸುಂದರ್ ಮೆಹರ್ ಕುಡಿದು ಮಲಗಿದ್ದಾನೆ. ಶಿಕ್ಷಕನನ್ನು ಜನರು ಪ್ರಶ್ನೆ ಮಾಡಿದ್ರೆ, ನಾನು ಒಳ್ಳೆ ಮನುಷ್ಯ. ನನಗ್ಯಾಕೆ ತೊಂದರೆ ಕೊಡ್ತಿದ್ದೀರಿ ಎಂದು ಪ್ರಶ್ನೆ ಮಾಡ್ತಿದ್ದಾನೆ. ಕಳೆದ ಶುಕ್ರವಾರವಷ್ಟೇ ಈ ಶಿಕ್ಷಕ ಶಾಲೆಗೆ ನಿಯೋಜನೆಗೊಂಡಿದ್ದ. ಶಾಲೆಗೆ ಕುಡಿದು ಬಂದು, ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರನ್ನು ನಿಂದಿಸಿದ್ದಾನೆ. ಮುಖ್ಯೋಪಾದ್ಯಾಯರು ಊರಿನ ಜನರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಜನರಿಗೂ ಛೀಮಾರಿ ಹಾಕಿದ್ದಾನೆ. ಶಿಕ್ಷಣ ಇಲಾಖೆ ಕುಡುಕ ಶಿಕ್ಷಕನನ್ನು ಅಮಾನತು ಮಾಡಿದೆ.
ಇನ್ನು ರೇವಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ರಮಾಕಾಂತ್ ವರ್ಮಾ ಕೂಡ ಕುಡಿದು ಶಾಲೆಗೆ ಬರ್ತಿದ್ದಾನೆ. ಮಕ್ಕಳನ್ನು ಕ್ಲಾಸ್ ನಿಂದ ಓಡಿಸಿ, ಅಲ್ಲಿಯೇ ನಿದ್ರೆ ಮಾಡ್ತಿರುವ ವಿಡಿಯೋವನ್ನು ಸಿಬ್ಬಂದಿ ಜಿಲ್ಲಾಧಿಕಾರಿಗೆ ಕಳುಹಿಸಿದ್ದಾರೆ.