ಹೆತ್ತ ಮಗು ಕಣ್ಣೆದುರೇ ಶವದ ರೂಪದಲ್ಲಿ ನೋಡೋ ಕರ್ಮ ಯಾವ ಅಪ್ಪ-ಅಮ್ಮನಿಗೂ ಬೇಡ. ಆದರೆ ಇಲ್ಲೊಬ್ಬ ತಂದೆಯ ಕಥೆ ಕೇಳಿ. ಎತ್ತಾಡಿಸಿದ ಕೈಯಲ್ಲೇ ಮಗುವನ್ನ ಹೆಣವಾಗಿ ಎತ್ತಿಕೊಳ್ಳೊ ಸಂದರ್ಭ ಎದುರಾಗಿತ್ತು. ಅಷ್ಟೆ ಅಲ್ಲ, ಅದೇ ನವಜಾತ ಮಗುವಿನ ಮೃತದೇಹ ಆ್ಯಂಬುಲೆನ್ಸ್‌ನಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ದುಡ್ಡಿಲ್ಲದೇ ಇದ್ದರಿಂದ ಕೈ ಚೀಲದಲ್ಲೇ ಆ ಮಗುವಿನ ಶವ ಹಾಕಿಕೊಂಡು ಹೋಗಬೇಕಾಯ್ತು.
ಈ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ. ಬುಡಕಟ್ಟು ಜನಾಂಗದ ಸುನೀಲ್ ಧುರ್ವೆ ಮತ್ತು ಪತ್ನಿ ಜುಮ್ನಿಬಾಯಿ ಇತ್ತೀಚೆಗಷ್ಟೆ ಜಬಲ್ ಪುರ್‌ನ ವೈದ್ಯಕೀಯ ಕಾಲೇಜಿನಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ನವಜಾತ ಮಗು ದುರ್ಬಲ ಆಗಿದ್ದರಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ಹೆಚ್ಚಿನ ಚಿಕಿತ್ಸೆ ಕೊಟ್ಟರೂ ಮಗು ಬದುಕುಳಿದಿರಲಿಲ್ಲ. ಕೊನೆಗೆ ಆ ದಂಪತಿಗಳ ಬಳಿ ಮಗುವಿನ ಶವ ಆ್ಯಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಲು ಸಹ ದುಡ್ಡಿರಲಿಲ್ಲ.
ಒ೦ದು ಕಡೆ ಮಗುವನ್ನ ಉಳಿಸಿಕೊಳ್ಳಲಾಗಲಿಲ್ಲ ಅನ್ನೊ ನೋವು. ಇನ್ನೊಂದು ಕಡೆ ಮಗುವಿನ ಮೃತ ದೇಹ ಸ್ಮಶಾನಕ್ಕೆ ತೆಗೆದುಕೊಂಡು ಹೋಗೋದಾದರೂ ಹೇಗೆ ಅಂತ ಗೊತ್ತಾಗದ ಈ ದಂಪತಿ ಕಂಗಾಲಾಗಿದ್ದರು. ಕೊನೆಗೆ ಕೈಯಲ್ಲಿದ್ದ ಚೀಲದಲ್ಲೇ ಮಗುವಿನ ಶವ ಹಾಕಿಕೊಂಡು ಅಲ್ಲೇ ಇದ್ದ ಬಸ್‌ನಲ್ಲಿ ಕುಳಿತಿದ್ದಾರೆ.
ಮಗು ಕಳೆದುಕೊಂಡ ನೋವು ತಾಯಿಗೆ ಬಿಕ್ಕಿ-ಬಿಕ್ಕಿ ಅಳುವಂತೆ ಮಾಡಿತ್ತು. ಆದರೆ ತಂದೆ ಮಾತ್ರ ಕಲ್ಲು ಹೃದಯ ಮಾಡಿಕೊಂಡು ಮಗುವಿನ ಮೃತದೇಹ ಇರುವ ಚೀಲ ಹಿಡಿದುಕೊಂಡೇ ಕೂತಿದ್ದ. ಕೊನೆಗೆ ಬಸ್‌ನಿಂದ ಇಳಿಯುವಾಗ ಇದು ಕೆಲವರ ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳೀಯರು ಅಲ್ಲಿ ಜಮಾಯಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.