ಕೆಲವರಿಗೆ ಚುಚ್ಚುಮದ್ದು ಅಂದ್ರೆ ಅಲರ್ಜಿ, ಇನ್ನು ಹಲವರಿಗೆ ಭಯ. ಆದ್ರೆ ಮಧ್ಯಪ್ರದೇಶದ ಹುಡುಗಿಯೊಬ್ಬಳು ಕೊರೋನಾ ವ್ಯಾಕ್ಸಿನ್ ಪಡೆಯಲು ಹೆದರಿ ಮರವನ್ನ ಹತ್ತಿ ಕುಳಿತಿದ್ದಳು. ಈ ಘಟನೆ ಎಂಪಿಯ ಚತ್ತರ್ ಪುರ ಜಿಲ್ಲೆಯ ಮನ್ಕಾರಿ ಗ್ರಾಮದಲ್ಲಿ ನಡೆದಿದೆ.
ಭಾರತದಲ್ಲಿ ಮಕ್ಕಳಿಗೂ ಲಸಿಕೆ ನೀಡುವ ಅಭಿಯಾನ ಶುರುವಾಗಿ ಹಲವು ದಿನಗಳಾಗುತ್ತಿವೆ. ಹಲವು ಗ್ರಾಮಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆಮನೆಗೆ ಹೋಗಿ ಲಸಿಕೆ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ತನ್ನ ಮನೆ ಕಡೆಗೆ ಬರುತ್ತಿದ್ದನ್ನು ಕಂಡ ರೀನಾ ಎನ್ನುವ ಹುಡುಗಿ, ಮನೆಯಿಂದ ಕಾಲ್ಕಿತ್ತಿದ್ದಾಳೆ. ಆಕೆಯ ಕುಟುಂಬದವರು ಅವಳ ಹಿಂದೆ ಹೋಗಿದ್ದಾರೆ, ಆದರೆ ಅಷ್ಟೊತ್ತಿಗಾಗಲೆ ಆಕೆ ಮರ ಹತ್ತಿ ಕುಳಿತು ನನಗೆ ವ್ಯಾಕ್ಸಿನ್ ಬೇಡ ಎಂದು ಹಠ ಮಾಡುತ್ತಿದ್ದಳು.
ಆಕೆಯ ಪೋಷಕರು ಸೇರಿದಂತೆ, ವ್ಯಾಕ್ಸಿನ್ ನೀಡಲು ಬಂದಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರು ರೀನಾಳ ಮನವೊಲಿಸಲು ಪ್ರಯತ್ನಿಸಿದರು. ಒಬ್ಬರು ಕೈಯ್ಯಲ್ಲಿ ಸಿರಿಂಜ್ ಹಿಡಿದು ಆಕೆಯನ್ನ ಮರದಿಂದ ಕೆಳಗಿಳಿಯಲು ಕೇಳಿಕೊಳ್ಳುತ್ತಿದ್ದರು, ಆದರೆ ಆಕೆ ಕೆಳಗೆ ಇಳಿಯಲಿಲ್ಲ. ಕಡೆಗೆ ಮತ್ತೊಬ್ಬ ಆರೋಗ್ಯ ಕಾರ್ಯಕರ್ತರು ರೀನಾಗೆ ನೀನು ಮರದ ಮೇಲೆಯೆ ಕುಳಿತುಕೊಂಡು ಲಸಿಕೆ ತೆಗೆದುಕೊ ಎಂದರು. ಹಲವರ ಆಕೆಗೆ ಕೇಳಿಕೊಂಡ ನಂತರ ಮರ ಇಳಿದು ಮರದ ಬಳಿಯೆ ಕುಳಿತು ರೀನಾ ತನ್ನ ಮೊದಲ ಡೋಸ್ ಲಸಿಕೆ ಪಡೆದಳು.