ಮಧ್ಯಪ್ರದೇಶದ ರೇವಾದಲ್ಲಿ ಆರು ವರ್ಷದ ಬಾಲಕ ಬೋರ್ ವೆಲ್ ನಲ್ಲಿ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ಗಡಿಭಾಗದ ಮಾಣಿಕಾ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 3.30 ಕ್ಕೆ ಈ ಘಟನೆ ನಡೆದಿದ್ದು, ಬಾಲಕ ಮಯೂರ್ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಗೋಧಿ ಬೆಳೆಲ್ಲಿ ಕೊಯ್ಲು ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೋರ್ ವೆಲ್ ಗೆ ಬಿದ್ದಿದ್ದಾನೆ.
ಸುಮಾರು 40 ಅಡಿ ಆಳದಲ್ಲಿ ಸಿಲುಕಿರುವ ಮಗುವನ್ನು ರಕ್ಷಿಸಲು ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ(ಎಸ್‌ಡಿಇಆರ್‌ಎಫ್) ತಂಡವನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ರೇವಾ ಕಲೆಕ್ಟರ್ ಪ್ರತಿಭಾ ಪಾಲ್ ತಿಳಿಸಿದ್ದಾರೆ.
ಪೈಪ್ ಮೂಲಕ ಆಮ್ಲಜನಕ ಒಳಗೆ ಸರಬರಾಜು ಮಾಡಲಾಗುತ್ತಿದೆ ಮತ್ತು ಬಾಲಕನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಿಸಿಟಿವಿ ಕ್ಯಾಮೆರಾವನ್ನು ಸಹ ಕೆಳಗಿಳಿಸಲಾಯಿತು. ಆದರೆ ಕೆಲವು ಅಡಚಣೆಗಳಿಂದ ಕ್ಯಾಮೆರಾ ಅವನನ್ನು ತಲುಪಲು ಸಾಧ್ಯವಾಗಲಿಲ್ಲ. ಅಕಾಲಿಕ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬೋರ್‌ವೆಲ್‌ಗೆ ಬಿದ್ದಿದ್ದ 2 ವರ್ಷ ಮಗುವನ್ನು ಕಾರ್ಯಾಚಾರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಲಾಯಿತು.