
ಮಕ್ಕಳೊಂದಿಗೆ ತವರಿಗೆ ತೆರಳಿದ್ದ ಪತ್ನಿ, ಮರಳಿ ಬಾರದ್ದಕ್ಕೆ ಪತಿಯೊಬ್ಬ ಹೈಡ್ರಾಮಾ ನಡೆಸಿದ್ದಾನೆ. ತನ್ನ ಮಣಿಕಟ್ಟನ್ನು ಕುಯ್ದುಕೊಂಡು ಮೊಬೈಲ್ ಟವರ್ ಏರಿ ರಂಪಾಟ ನಡೆಸಿದ್ದು, ಇಂಥದೊಂದು ವಿಲಕ್ಷಣ ಘಟನೆ ಮಧ್ಯಪ್ರದೇಶದ ಖಾಂಡವಾದಲ್ಲಿ ನಡೆದಿದೆ.
ಖಾಂಡವಾದ ಕೊಡಿಯ ಹನುಮಾನ್ ದೇಗುಲ ಸಮೀಪದ ನಿವಾಸಿ ದಿನೇಶ್ ರಾಮಧನ್ ರಂಪಾಟ ನಡೆಸಿದವನಾಗಿದ್ದು, ಈತನ ಪತ್ನಿ ಕೆಲ ದಿನಗಳ ಹಿಂದೆ ಮಕ್ಕಳೊಂದಿಗೆ ತವರಿಗೆ ತೆರಳಿದ್ದಳು ಎನ್ನಲಾಗಿದೆ.
ಪತ್ನಿ ಮತ್ತು ಮಕ್ಕಳನ್ನು ಕರೆತರಲು ಈತ ಹಲವು ಬಾರಿ ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈತ ಪತ್ನಿ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದು, ಆದರೆ ದಿನೇಶ್ ಕಂಠಪೂರ್ತಿ ಕುಡಿದಿದ್ದ ಕಾರಣ ಪೊಲೀಸರು ದೂರು ಸ್ವೀಕರಿಸಿರಲಿಲ್ಲ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಠಾಣೆ ಮುಂದೆಯೇ ತನ್ನ ಮಣಿಕಟ್ಟನ್ನು ಕುಯ್ದುಕೊಂಡ ದಿನೇಶ್ ಬಳಿಕ ಸಮೀಪದಲ್ಲಿದ್ದ ಮೊಬೈಲ್ ಟವರ್ ಏರಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನ ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.
ಬಳಿಕ ಆತನ ತಾಯಿ ಮತ್ತು ಕುಟುಂಬ ಸದಸ್ಯರನ್ನು ಕರೆಯಿಸಿಕೊಂಡು ಅಂತಿಮವಾಗಿ ಮನವೊಲಿಸಿ ಕೆಳಗಿಳಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.