ಡಿಂಡೋರಿ(ಮಧ್ಯಪ್ರದೇಶ): ಎಸ್‌ಡಿಎಂ (ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್) ಅಧಿಕಾರಿಯನ್ನು ಆಕೆಯ ಪತಿ ದಿಂಡೋರಿಯ ಅವರ ನಿವಾಸದಲ್ಲಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಶಹಪುರದಲ್ಲಿ SDM ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಯು ಯಾವುದೇ ಸಾಕ್ಷ್ಯ ಸಿಗದಂತೆ ಮರೆ ಮಾಚುವ ಪ್ರಯತ್ನದಲ್ಲಿ, ತನ್ನ ಮೃತ ಹೆಂಡತಿಯ ಬಟ್ಟೆಗಳನ್ನು ಮತ್ತು ರಕ್ತಸಿಕ್ತ ಬೆಡ್ಶೀಟ್ ತೊಳೆದಿದ್ದಾನೆ. ಆದರೆ, 24 ಗಂಟೆಯೊಳಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಐಜಿ ಮುಖೇಶ್ ಶ್ರೀವಾಸ್ತವ ಅವರ ಪ್ರಕಾರ, ಪತಿ ಮನೀಶ್ ಶರ್ಮಾ(45) ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಭಾನುವಾರ ಮಧ್ಯಾಹ್ನ ಎಸ್‌ಡಿಎಂ ನಿಶಾ ನಾಪಿತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎಸ್‌ಡಿಎಂ ನಿಶಾ ಅವರ ಪತಿ ಮನೀಶ್ ಶರ್ಮಾ ಅವರು ಪತ್ನಿಗೆ ಎದೆನೋವು ಕಾಣಿಸಿಕೊಂಡ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ರತ್ನೇಶ್ ದ್ವಿವೇದಿ, ಆಸ್ಪತ್ರೆಗೆ ಕರೆತರುವ ನಾಲ್ಕೈದು ಗಂಟೆಗಳ ಮೊದಲು ನಿಶಾ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.