ಭೋಪಾಲ್: ಮಧ್ಯಪ್ರದೇಶ ಸರ್ಕಾರ ಜೈನ ಯಾತ್ರಾ ಕೇಂದ್ರ ಕುಂದಲ್ ಪುರ ಸೇರಿದಂತೆ ಎರಡು ಪಟ್ಟಣಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ರಾಜ್ಯದ ರಾಜಧಾನಿ ಭೋಪಾಲ್‌ನಿಂದ 285 ಕಿಮೀ ದೂರದಲ್ಲಿರುವ ಕುಂದಲ್ ಪುರದಲ್ಲಿ ಜೈನ ಸಮುದಾಯದ ಪಂಚಕಲ್ಯಾಣಕ್ ಮಹಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ್ ಜಿ ಮಹಾರಾಜ್ ಅವರ ಪ್ರೇರಣೆಯಿಂದ ನಾನು ಕುಂದಲ್‌ಪುರ ಮತ್ತು ಬಂದಕ್‌ಪುರ(ಎರಡೂ ದಾಮೋಹ್ ಜಿಲ್ಲೆಯಲ್ಲಿ) ‘ಪವಿತ್ರ ಕ್ಷೇತ್ರ’ಗಳು ಎಂದು ಎಂದು ಘೋಷಿಸುತ್ತಿದ್ದೇನೆ. ಅಲ್ಲಿ ಮಾಂಸ ಮತ್ತು ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಹೇಳಿದರು.
ಬಂದಕ್ ಪುರ ಪಟ್ಟಣವು ಶಿವನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ವಿದ್ಯಾಸಾಗರ ಮಹಾರಾಜ್ ಅವರ ಆಶಯದಂತೆ ರಾಜ್ಯ ಸರ್ಕಾರವು ಒಂದು ವರ್ಷದೊಳಗೆ ಹಿಂದಿಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಅಧ್ಯಯನಗಳನ್ನು ಪ್ರಾರಂಭಿಸಲಿದೆ ಎಂದು ಚೌಹಾಣ್ ಹೇಳಿದರು. ಗೋಸಂರಕ್ಷಣೆಯ ಕಾರ್ಯಕ್ಕೆ ನಾಗರಿಕರು ಮುಂದಾಗಬೇಕು ಮತ್ತು ಉತ್ತಮ ಪರಿಸರಕ್ಕಾಗಿ ಗಿಡಗಳನ್ನು ನೆಡಬೇಕು ಎಂದು ಮನವಿ ಮಾಡಿದರು.
ಮಧ್ಯಪ್ರದೇಶ ಸರ್ಕಾರವು ಮುಂದಿನ ಶೈಕ್ಷಣಿಕ ಅಧಿವೇಶನದಿಂದ ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಪ್ರಾರಂಭಿಸಲಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಈ ಹಿಂದೆ ಹೇಳಿದ್ದರು.