‘ಸಾಹೇಬ್ ಮೇ ಜಿಂದಾ ಹೂಂ’ (ಸರ್, ನಾನು ಇನ್ನೂ ಬದುಕಿದ್ದೇನೆ’) ಎಂದು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಜಯೋರಾ ತಹಸಿಲ್‌ನಲ್ಲಿ ವೃದ್ಧರೊಬ್ಬರು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಾ ಘೋಷಿಸುತ್ತಿದ್ದಾರೆ.
ಸರ್ಕಾರಿ ದಾಖಲೆ ಪ್ರಕಾರ ಲತೀಫ್ ಖಾನ್ ಮನ್ಸೂರಿ ಅವರು ಸಾವನ್ನಪ್ಪಿದ್ದಾರೆ. ಆದರೆ ಅವರು ಜೀವಂತವಾಗಿರುವುದನ್ನು ಸಾಬೀತುಪಡಿಸಲು ಪ್ರತಿ ಸರ್ಕಾರಿ ಕಚೇರಿಯ ಬಾಗಿಲು ಬಡಿಯುತ್ತಿದ್ದಾರೆ.
ಜವೋರಾ ತೆಹಸಿಲ್‌ನ ಸಣ್ಣ ಪಿಪ್ಲಿಯಾಜೋಧ ಗ್ರಾಮದ ಲತೀಫ್ ಅವರು ಕಳೆದ ಎರಡು ವರ್ಷಗಳಲ್ಲಿ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಸಾವನ್ನಪ್ಪಿದ್ದಾರೆಂದು ನಮೂದಿಸಿರೋದ್ರಿಂದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಸರ್ಕಾರಿ ಯೋಜನೆಗಳ ಫಲ ಪಡೆಯಲು ವಿಫಲರಾಗಿದ್ದಾರೆ.
ಲತೀಫ್ ತಾವು ಜೀವಂತವಾಗಿ ಇರುವುದನ್ನ ಸಾಬೀತುಪಡಿಸಲು ಪಟ್ಟುಬಿಡದೆ ಪ್ರಯತ್ನಿಸುತ್ತಿದ್ದಾರೆ. ಮತ್ತು ಸರ್ಕಾರಿ ದಾಖಲೆಗಳನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳನ್ನು ವಿನಂತಿಸುತ್ತಿದ್ದಾರೆ.
ತನ್ನ ಅವಸ್ಥೆಯನ್ನು ವಿವರಿಸಿದ ಲತೀಫ್, ಪಿಎಂ ಕಿಸಾನ್ ಸಮ್ಮಾನ್ ನಿಧಿ ಪಡೆಯಲು ವಿಫಲವಾದ ನಂತರ ಮೇ 2021 ರಲ್ಲಿ ಸರ್ಕಾರಿ ದಾಖಲೆಗಳಲ್ಲಿ ತನ್ನ ಸಾವಾಗಿದೆ ಎಂದು ನಮೂದಿಸಿರುವ ಬಗ್ಗೆ ನನಗೆ ತಿಳಿಯಿತು ಎಂದು ಹೇಳಿದರು. ಕಾರಣ ತಿಳಿಯಲು ಪ್ರಯತ್ನಿಸಿ ಪೋರ್ಟಲ್‌ಗೆ ಭೇಟಿ ನೀಡಿದಾಗ ಪೋರ್ಟಲ್‌ನಲ್ಲಿ “ಸಾವಿನ ಕಾರಣದಿಂದ ಫಲಾನುಭವಿ ನಿಷ್ಕ್ರಿಯರಾಗಿದ್ದಾರೆ” ಎಂದು ಬರೆಯಲಾಗಿತ್ತು.
ಲತೀಫ್ ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರು. ಆದರೆ ಇಂದಿಗೂ ಪೋರ್ಟಲ್‌ನಲ್ಲಿ ತನ್ನನ್ನು ತಾನು ಜೀವಂತವಾಗಿ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಲತೀಫ್ ಅವರು ಆಗಸ್ಟ್ 20, 2020 ರಿಂದ ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು ಪಡೆಯಲು ಪ್ರಾರಂಭಿಸಿದರು, ಆದರೆ ಮೇ 9, 2021 ರ ನಂತರ ಸರ್ಕಾರಿ ದಾಖಲೆಗಳ ಪ್ರಕಾರ ಅವರು ಸತ್ತಿದ್ದರಿಂದ ಅವರ ಖಾತೆಗೆ ಒಂದೇ ಒಂದು ಕಂತನ್ನು ಜಮಾ ಮಾಡಲಾಗಿಲ್ಲ ಎಂದು ಹೇಳಿದರು.
ಲತೀಫ್ ಅವರು ಪಟ್ವಾರಿಗೆ ಹೇಳಿದಾಗಲೆಲ್ಲಾ ಅಧಿಕಾರಿಯೊಬ್ಬರು ನಾಳೆ ಬನ್ನಿ ಎಂದು ಅವರನ್ನು ತಪ್ಪಿಸಲು ಪ್ರಯತ್ನಿಸಿದರು. ಎಸ್‌ಡಿಎಂ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಿದ್ದೇನೆ. ಗ್ರಾಮಕ್ಕೆ ಭೇಟಿ ನೀಡಿದ ವಿಕಾಸ ಯಾತ್ರೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರೂ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಈಗ ಪಟ್ವಾರಿ ಕೂಡ ಫೋನ್ ಎತ್ತುವುದನ್ನು ನಿಲ್ಲಿಸಿದ್ದಾರೆ ಎಂದರು.