ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಖಾಸಗಿ ಶಾಲೆಯೊಂದು ಮುಸ್ಲಿಮೇತರ ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಸ್ಕಾರ್ಫ್ ಧರಿಸಲು ಒತ್ತಾಯಿಸಿದೆ ಎಂಬ ಆರೋಪ ಕೇಳಿಬಂದಿದ್ದು ಸರ್ಕಾರವು ತನಿಖೆಗೆ ಆದೇಶಿಸಿದೆ.
ಖಾಸಗಿ ಶಾಲೆಯೊಂದು ಬೋರ್ಡ್ ಪರೀಕ್ಷೆಯ ಟಾಪರ್‌ಗಳ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮುಸ್ಲಿಮರಲ್ಲದ ಕೆಲವು ಹುಡುಗಿಯರು ಸ್ಕಾರ್ಫ್ ಧರಿಸಿದ್ದಾರೆ. ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು ಹುಡುಗಿಯರು ಹಿಜಾಬ್ ಧರಿಸಲು ಶಾಲೆಯಿಂದ ಬಲವಂತಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ವಿಷಯವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಅವರು ದಮೋಹ್ ಜಿಲ್ಲಾಧಿಕಾರಿಗಳಿಗೆ ತನಿಖೆಗೆ ಆದೇಶಿಸಿದ್ದಾರೆ.
ಮೇ 30 ರಂದು ಎನ್‌ಸಿಪಿಸಿಆರ್ ದೂರು ಬಂದಿದ್ದು, ದಾಮೋಹ್ ಜಿಲ್ಲಾ ಶಿಕ್ಷಣಾಧಿಕಾರಿ ವಿದ್ಯಾರ್ಥಿಗಳ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು. ಇದೇ ವೇಳೆ ಯಾವುದೇ ಪೋಷಕರು ದೂರು ನೀಡಿಲ್ಲ ಎಂದು ಅಧಿಕಾರಿ ಹೇಳಿದರು.
ಬಾಲಕಿಯರ ಶಾಲೆಯ ಡ್ರೆಸ್ ಕೋಡ್ ಶಿರೋವಸ್ತ್ರಗಳು, ಸಲ್ವಾರ್ ಮತ್ತು ಕುರ್ತಾಗಳನ್ನು ಒಳಗೊಂಡಿರುತ್ತದೆ. ಆದರೆ ನಾವು ಯಾವುದೇ ದಿನ ಸ್ಕಾರ್ಫ್ ಧರಿಸಲು ಮರೆತರೂ, ನಮಗೆ ಶಿಕ್ಷೆಯಾಗುವುದಿಲ್ಲ. ನಮಗೆ ದೂರು ನೀಡಲು ಏನೂ ಇಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ ಎಂದರು.
ವಿಎಚ್‌ಪಿ, ಬಜರಂಗದಳ ಮತ್ತು ಎಬಿವಿಪಿ ಸೇರಿದಂತೆ ಬಲಪಂಥೀಯ ಗುಂಪುಗಳು ದಾಮೋಹ್‌ನಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸಿದವು. ಗಂಗಾ ಜಮುನಾ ಹೈಯರ್ ಸೆಕೆಂಡರಿ ಶಾಲೆಯು ಮುಸ್ಲಿಮೇತರ ವಿದ್ಯಾರ್ಥಿನಿಯರನ್ನು ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿದೆ ಎಂದು ಆರೋಪಿಸಿದರು.
“ಹುಡುಗಿಯರು ಹಿಜಾಬ್ ಧರಿಸಿಲ್ಲ, ಬದಲಿಗೆ ಸ್ಕಾರ್ಫ್‌ಗಳನ್ನು ಧರಿಸುತ್ತಾರೆ. ಇದು ಶಾಲೆಯ ಡ್ರೆಸ್ ಕೋಡ್‌ನ ಭಾಗವಾಗಿದೆ. ನಾವು ಯಾವುದೇ ವಿದ್ಯಾರ್ಥಿನಿಗೆ ಅವರ ಅವರ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಇಚ್ಚೆಯ ವಿರುದ್ಧವಾಗಿ ಏನನ್ನೂ ಧರಿಸುವಂತೆ ಒತ್ತಾಯಿಸಿಲ್ಲ. ಎಂದು ಶಾಲಾ ನಿರ್ದೇಶಕ ಮುಷ್ತಾಕ್ ಮೊಹಮ್ಮದ್ ಹೇಳಿದ್ದಾರೆ. ಈ ವಿಚಾರ ದೊಡ್ಡದಾಗ್ತಿದ್ದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತನಿಖೆಗೆ ಆದೇಶಿಸಿದ್ದಾರೆ.