ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ಚಲಿಸುಗವ ಆಂಬ್ಯುಲೆನ್ಸ್ ನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ.
‘108’ ತುರ್ತು ಸೇವೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಂಬ್ಯುಲೆನ್ಸ್ ನಲ್ಲಿ ಆಘಾತಕಾರಿ ಘಟನೆ ನವೆಂಬರ್ 22 ರಂದು ನಡೆದಿದ್ದು, ಚಾಲಕ ಸೇರಿದಂತೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಾಲಕಿ ತನ್ನ ಸಹೋದರಿ ಮತ್ತು ಸೋದರ ಮಾವನೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಪ್ರಯಾಣಿಸುತ್ತಿದ್ದಳು(ಅವರಲ್ಲಿ ಯಾರೂ ರೋಗಿಯಲ್ಲ) ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್(ರೇವಾ ರೇಂಜ್) ಸಾಕೇತ್ ಪಾಂಡೆ ಹೇಳಿದ್ದಾರೆ.
ಮೂವರ ಹೊರತಾಗಿ ಇನ್ನೂ ಇಬ್ಬರು ವ್ಯಕ್ತಿಗಳು, ಚಾಲಕ ಮತ್ತು ಅವರ ಸಹಚರರು ರೋಗಿಯ ಸಾಗಣೆ ವಾಹನದಲ್ಲಿದ್ದರು. ಮಾರ್ಗಮಧ್ಯೆ ನೀರು ತರುವ ನೆಪದಲ್ಲಿ ಬಾಲಕಿಯ ಸಹೋದರಿ ಹಾಗೂ ಆಕೆಯ ಸೋದರ ಮಾವ ವಾಹನದಿಂದ ಇಳಿದಿದ್ದಾರೆ. ಆಂಬ್ಯುಲೆನ್ಸ್ ಚಾಲಕ, ಅವರಿಗಾಗಿ ಕಾಯುವ ಬದಲು ವೇಗವಾಗಿ ವಾಹನ ಓಡಿಸಿದ್ದಾನೆ.
ನಂತರ, ಅವನೊಂದಿಗೆ ಪ್ರಯಾಣಿಸುತ್ತಿದ್ದ ಚಾಲಕನ ಸಹವರ್ತಿ ರಾಜೇಶ್ ಕೇವತ್, ನವೆಂಬರ್ 22 ರಂದು(ಶುಕ್ರವಾರ) ಸುನ್ಸಾನ್ ಗ್ರಾಮದಲ್ಲಿ ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಾತ್ರಿಯಿಡೀ ಬಾಲಕಿಯನ್ನು ಒತ್ತೆಯಾಳಾಗಿಟ್ಟ ನಂತರ, ಮರುದಿನ ಬೆಳಿಗ್ಗೆ ಇಬ್ಬರು ಆರೋಪಿಗಳು ಅವಳನ್ನು ರಸ್ತೆಬದಿಯಲ್ಲಿ ಎಸೆದರು ಎಂದು ಡಿಐಜಿ ಹೇಳಿದ್ದಾರೆ.
ನವೆಂಬರ್ 25 ರಂದು, ಸಂತ್ರಸ್ತೆ ಮತ್ತು ಆಕೆಯ ತಾಯಿ ಅಂತಿಮವಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆಪಾದಿತ ಅತ್ಯಾಚಾರಿ(ಕೇವತ್) ಸೇರಿದಂತೆ ನಾಲ್ವರ(25 ರಿಂದ 30 ವರ್ಷ ವಯಸ್ಸಿನವರು) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಆರೋಪಿಗಳಾದ ಆಂಬ್ಯುಲೆನ್ಸ್ ಚಾಲಕ ವೀರೇಂದ್ರ ಚತುರ್ವೇದಿ ಮತ್ತು ಆತನ ಸಹಚರ ಕೇವತ್ ಅವರನ್ನು ಬುಧವಾರ ಬಂಧಿಸಲಾಗಿದೆ. ಅಪರಾಧಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊತ್ತಿರುವ ಬಾಲಕಿಯ ಸಹೋದರಿ ಮತ್ತು ಸೋದರ ಮಾವನ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಎಲ್ಲಾ ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.