ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಸ್ಥಾಪಕರಾದ ಕೆ.ಬಿ. ಹೆಡ್ಗೆವಾರ್, ಭಾರತೀಯ ಜನಸಂಘದ ನಾಯಕ ದೀನದಯಾಳ್ ಉಪಾಧ್ಯಾಯ, ಸ್ವಾಮಿ ವಿವೇಕಾನಂದ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆಯೂ ವ್ಯಾಸಂಗ ಮಾಡಬೇಕಾಗುತ್ತದೆ.
ಅದು ಕೂಡ ತಮ್ಮ ವೈದ್ಯಕೀಯ ವೃತ್ತಿ ಪರ ಕೋರ್ಸ್ ನ ಮೊದಲ ವರ್ಷದಲ್ಲಿನ ಪಠ್ಯದಲ್ಲಿ ಸಾಮಾಜಿಕ ನೈತಿಕತೆ ವಿಚಾರವಾಗಿ ಹಿಂದುತ್ವ ನಾಯಕರ ಜೀವನ ಆದರ್ಶಗಳು ಮತ್ತು ಸಿದ್ಧಾಂತಗಳ ಬಗ್ಗೆ ಅಧ್ಯಯನ ಮಾಡಲೇಬೇಕಿದೆ ಎಂದು ಮಧ್ಯಪ್ರದೇಶ ಸರಕಾರದ ಹೊಸ ಆದೇಶ ಹೇಳಿದೆ. ಈ ಬಗ್ಗೆ ರಾಜ್ಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಘೋಷಣೆ ಮಾಡಿದ್ದಾರೆ.
ಇಷ್ಟೇ ಅಲ್ಲದೆಯೇ ಎಂಬಿಬಿಎಸ್ ವಿದ್ಯಾರ್ಥಿಗಳು ಆಯುರ್ವೇದ ಪಿತಾಮಹ ಮಹರ್ಷಿ ಚರಕ ಮತ್ತು ಶಸ್ತ್ರಚಿಕಿತ್ಸೆಯ ಪಿತಾಮಹ ಎಂದೇ ಹೆಸರಾದ ಮಹರ್ಷಿ ಸುಶೃತ ಅವರ ಬಗ್ಗೆಯೂ ಮೊದಲ ವರ್ಷದ ವ್ಯಾಸಂಗದಲ್ಲಿ ಅಧ್ಯಯನ ಮಾಡಬೇಕಿದೆ. ವಿದ್ಯಾರ್ಥಿಗಳು ಈ ಮಹನೀಯರ ಬಗ್ಗೆ ಅಧ್ಯಯನ ಮಾಡುವುದರಿಂದ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಾರೆ. ಡಿಸೆಂಬರ್ ವೇಳೆಗೆ ಶುರುವಾಗುವ ಹೊಸ ಶೈಕ್ಷಣಿಕ ವರ್ಷದಿಂದಲೇ ಮಹನೀಯರ ಬಗೆಗಿನ ವ್ಯಾಸಂಗ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವ ಸಾರಂಗ್ ತಿಳಿಸಿದ್ದಾರೆ.
ಇದರಲ್ಲಿ ಸರಕಾರದ ಹುನ್ನಾರ ಏನೂ ಇಲ್ಲ. ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್ಎಮ್ಸಿ) ಎಂಬಿಬಿಎಸ್ ಮೊದಲ ವರ್ಷದ ಫೌಂಡೇಷನ್ ಕೋರ್ಸ್ ಜತೆಗೆ ನೈತಿಕ ಮೌಲ್ಯಗಳ ಪಠ್ಯ ಸೇರಿಸಲು ಶಿಫಾರಸು ಮಾಡಿದೆ. ಅದರಂತೆ ಮಹಾನ್ ನಾಯಕರ ಜೀವನಾದರ್ಶಗಳನ್ನು ಪಠ್ಯದಲ್ಲಿ ಸೇರಿಸಿದ್ದೇವೆ ಎಂದು ಸಾರಂಗ್ ಸಮರ್ಥನೆ ಕೊಟ್ಟಿದ್ದಾರೆ.