ರೇವಾ(ಮಧ್ಯಪ್ರದೇಶ): ತನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ವ್ಯಕ್ತಿಯೊಬ್ಬ ಯುವಕನನ್ನು ನರಬಲಿಯಾಗಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಿಯೋತಿಗೆ ಸೇರಿದ ದಿವ್ಯಾಂಶ್ ಕೋಲ್(19) ಎಂಬ ಯುವಕನನ್ನು ಹತ್ಯೆಗೈದ ಆರೋಪಿಯನ್ನು ಬೇಧೋವಾ ಗ್ರಾಮದ ನಿವಾಸಿ ರಾಮಲಾಲ್(32) ಎಂದು ಗುರುತಿಸಲಾಗಿದೆ.
ರಾಮ್ ಲಾಲ್ ಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಗಂಡುಮಗುವನ್ನು ಬಯಸುತ್ತಿದ್ದ ರಾಮ್ ಲಾಲ್ ಗರ್ಭಿಣಿಯಾಗಿರುವ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದರೆ ಯುವಕನನ್ನು ಬಲಿ ಕೊಡುವುದಾಗಿ ಗ್ರಾಮ ದೇವತೆಗೆ ಹರಕೆ ಹೊತ್ತುಕೊಂಡಿದ್ದ.
ಕಳೆದ ತಿಂಗಳು ರಾಮ್ ಲಾಲ್ ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತನ್ನ ಹರಕೆ ಈಡೇರಿಸಲು ಯುವಕನನ್ನು ಹುಡುಕುತ್ತಿದ್ದ ಎಂದು ರೇವಾ ಸಿರ್ಮೌರ್ ನ ಉಪವಿಭಾಗಾಧಿಕಾರಿ ನವೀನ್ ತಿವಾರಿ ಹೇಳಿದ್ದಾರೆ.
ಜುಲೈ 6 ರಂದು ದಿವ್ಯಾಂಶ್ ಮೇಕೆಗಳನ್ನು ಮೇಯಿಸುತ್ತಿರುವುದನ್ನು ಕಂಡ ರಾಮ್‌ಲಾಲ್ ಸಹಾಯಕ್ಕಾಗಿ ದಿವ್ಯಾಂಶ್ ನನ್ನು ಕರೆದು ಹಳ್ಳಿಯಲ್ಲಿರುವ ದೇವಿ ದೇವಸ್ಥಾನಕ್ಕೆ ಬರುವಂತೆ ಕೇಳಿಕೊಂಡಿದ್ದಾನೆ. ಆತನ ಮಾತು ಬಂಬಿ ದಿವ್ಯಾಂಶ್ ಜೊತೆಗೆ ಹೋಗಿದ್ದಾನೆ. ನಂತರ ರಾಮಲಾಲ್ ದಿವ್ಯಾಂಶ್ ನನ್ನು ಕಡಿದು ಕೊಲೆ ಮಾಡಿ ಶವವನ್ನು ದೇವಸ್ಥಾನದಲ್ಲಿ ಬಿಟ್ಟಿದ್ದಾನೆ ಎಸ್.ಡಿ.ಪಿ.ಒ. ತಿವಾರಿ ಹೇಳಿದ್ದಾರೆ.
ಪೊಲೀಸರು ಜುಲೈ 6 ರಂದು ದೇವಸ್ಥಾನದಿಂದ ಶವವನ್ನು ಹೊರತೆಗೆದು ತನಿಖೆ ಆರಂಭಿಸಿದರು. ದಿವ್ಯಾಂಶ್ ಕೊನೆಯದಾಗಿ ರಾಮ್ ಲಾಲ್ ನೊಂದಿಗೆ ಕಾಣಿಸಿಕೊಂಡಿದ್ದ ಎಂದು ಪೊಲೀಸರು ತಿಳಿದು ಆತನನ್ನು ವಿಚಾರಣೆ ನಡೆಸಿದಾಗ, ಪೊಲೀಸರನ್ನೇ ದಾರಿತಪ್ಪಿಸಲು ಪ್ರಯತ್ನಿಸಿದ್ದಾನೆ. ಬಳಿಕ ಯುವಕನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ತನಗೆ ಮೂವರು ಹೆಣ್ಣು ಮಕ್ಕಳಿದ್ದು, ಗಂಡು ಮಗುವನ್ನು ಪಡೆಯಲು ಅವರು ಸಾಕಷ್ಟು ಪೂಜೆಗಳನ್ನು ಮಾಡಿದರೂ ಆದರೆ ಏನೂ ಪ್ರಯೋಜನವಾಗಲಿಲ್ಲ, ಗಂಡು ಮಗುವಿಗಾಗಿ ಯುವಕನನ್ನು ಬಲಿಕೊಡಬೇಕೆಂದು ಮಾಂತ್ರಿಕ ಹೇಳಿದ್ದ. ಕಳೆದ ತಿಂಗಳು ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಲಿ ಕೊಡಲು ಹುಡುಕುತ್ತಿದ್ದ ವೇಳೆ ಮೇಕೆ ಮೇಯುಸುತ್ತಿದ್ದ ದಿವ್ಯಾಂಶ್ ನೋಡಿ ಕೊಂದಿರುವುದಾಗಿ ಹೇಳಿದ್ದಾನೆ. ಪ್ರಕರಣದಲ್ಲಿ ಮಾಂತ್ರಿಕನ ಪಾತ್ರ ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.