ಕೆಲವು ದಿನಗಳ ಹಿಂದೆಯಷ್ಟೇ ಮಧ್ಯಪ್ರದೇಶದಲ್ಲಿ ಸ್ಥಳೀಯ ಬಿಜೆಪಿ ಮುಖಂಡನೊಬ್ಬ ವ್ಯಕ್ತಿಯೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿ ಬಂಧನಕ್ಕೊಳಗಾಗಿದ್ದರು. ಇದೀಗ ಇದೇ ರಾಜ್ಯದ ಸೆಹೋರ್ ಜಿಲ್ಲೆಯಲ್ಲಿ ಇಂತದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಮಹಿಳೆಯೊಬ್ಬರು ತನ್ನ ಪತಿ ತನಗೆ ಅವರ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪತಿಯು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗಿದ್ದು ಇದರಲ್ಲಿ ಕುಡಿತದ ಅಮಲಿನಲ್ಲಿದ್ದ ಪತಿಯು ಪತ್ನಿಯ ಮೇಲೆ ದೌರ್ಜನ್ಯ ನಡೆಸುತ್ತಿರೋದನ್ನು ಕಾಣಬಹುದಾಗಿದೆ. ಮಹಿಳೆಯ ದೂರಿನ ಮೇರೆಗೆ ಸೆಹೋರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಪತಿಯು ನನಗೆ ಥಳಿಸಿದ್ದು ಮಾತ್ರವಲ್ಲದೇ ಅವರ ಮೂತ್ರ ಕುಡಿಸಿದ್ದಾರೆ. ನನಗೆ ನ್ಯಾಯ ಬೇಕೆ ಬೇಕು. ಈ ಹಿಂದೆಯೂ ನಾನು ಪತಿಯಿಂದ ಸಾಕಷ್ಟು ನೋವು ಅನುಭವಿಸಿದ್ದೇನೆ. ಆದರೆ ಒಮ್ಮೆಯೂ ದೂರು ನೀಡುವ ಧೈರ್ಯ ಮಾಡಿರಲಿಲ್ಲ. ಒಮ್ಮೆ ನನ್ನ ಮೇಲೆ ಸೀಮೆಎಣ್ಣೆ ಸುರಿದು ಈತ ನನ್ನ ಸುಡಲು ಯತ್ನಿಸಿದ್ದ. ಆಗಲೂ ನಾನು ಸುಮ್ಮನೇ ಇದ್ದ. ಆದರೆ ಈ ರೀತಿ ಮೂತ್ರ ಕುಡಿಸಿದ್ದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ನನ್ನ ಮನವಿ ಯಾರೂ ಕೇಳದೇ ಹೋದರೆ ನಾನು ಮುಖ್ಯಮಂತ್ರಿಗಳ ಕಚೇರಿವರೆಗೂ ಹೋಗುತ್ತೇನೆ ಎಂದು ಹೇಳಿದ್ದಾರೆ.
ಪತಿಯು ನನ್ನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಅವುಗಳನ್ನು ವಿಡಿಯೋ ಕೂಡ ಮಾಡಿ ಇಟ್ಟುಕೊಂಡಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ಹೇಳಿದ್ದಾಳೆ ಎಂದು ಮಹಿಳಾ ಪೊಲೀಸ್ ಠಾಣಾ ಪ್ರಭಾರಿ ಅಧಿಕಾರಿ ಪೂಜಾ ರಜಪೂತ್ ಮಾಹಿತಿ ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 498A, 324, 323, 294, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.