ಮೂಢನಂಬಿಕೆಗೆ ಒಳಗಾಗಿ ಕೆಲವರು ತಮ್ಮ ಮಕ್ಕಳ ಪ್ರಾಣವನ್ನೇ ಪಣವಾಗಿಟ್ಟ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಚಿಕ್ಕ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವಾಗ ಆಸ್ಪತ್ರೆಗೆ ಹೋಗುವ ಬದಲು ಮಂತ್ರವಾದಿಯ ಮೊರೆ ಹೋಗುವುದು ಹಾಗೂ ತಮಗೆ ತಿಳಿದ ಮದ್ದು ನೀಡಲು ಯತ್ನಿಸುವುದು ಮಾಡಿ ಮಕ್ಕಳ ಪ್ರಾಣಕ್ಕೆ ಸಂಚಕಾರ ತರುತ್ತಾರೆ.
ಈಗ ಮಧ್ಯಪ್ರದೇಶದ ಶಾಡೋಲ್ ಜಿಲ್ಲೆಯಲ್ಲಿ ಅಂತವುದೇ ಒಂದು ಘಟನೆ ನಡೆದಿದ್ದು, ನ್ಯುಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಹೆಣ್ಣು ಮಗುವಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಕಾದ ಕಬ್ಬಿಣದಿಂದ ಹೊಟ್ಟೆಯ ಮೇಲೆ 51 ಬಾರಿ ಬರೆ ಹಾಕಲಾಗಿದೆ. ಕಾದ ಕಬ್ಬಿಣದ ಬರೆ ಹಾಕಿದರೆ ಗುಣಮುಖವಾಗುತ್ತದೆ ಎಂಬ ಮೂಢನಂಬಿಕೆಯಿಂದ ಈ ಕೆಲಸ ಮಾಡಲಾಗಿದೆ.
ಮಗುವಿನ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದಾಗ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಮಗು ಮೃತಪಟ್ಟಿದ್ದು, ಇದೀಗ ಮಕ್ಕಳ ಕಲ್ಯಾಣ ಇಲಾಖೆಯಿಂದ ಆರೋಪಿ ಮಹಿಳೆ ವಿರುದ್ಧ ದೂರು ನೀಡಲಾಗಿದೆ.