ಗ್ವಾಲಿಯರ್: ಅಪರಾಧ ಹಿನ್ನೆಲೆಯ ಮಧ್ಯ ಪ್ರದೇಶ ಗ್ವಾಲಿಯಾರ್ ಕಾಂಗ್ರೆಸ್ ನಾಯಕ ರಿಷಭ್ ಭದೋರಿಯಾ, ತಮ್ಮ ನಿವಾಸದಲ್ಲೇ ಪತ್ನಿ ಭಾವನಾ ಭದೋರಿಯಾಳನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಿಷಬ್ ರೌಡಿ ಶೀಟರ್ ಆಗಿದ್ದು, ಅಪರಾಧ ಕೃತ್ಯಗಳು ಆತನಿಗೆ ಹೊಸದಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ.
ಭಾವನಾ ಭದೋರಿಯಾಳ ಹತ್ಯೆ ಆಗಿರುವ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮಿಗೆ ಸೋಮವಾರ ನಸುಕಿನ 2.30ರ ವೇಳೆಗೆ ಕರೆ ಬಂದಿತ್ತು. ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ತೆರಳಿದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಅಪರಾಧ ಸ್ಥಳಕ್ಕೆ ಸಾರ್ವಜನಿಕ ಪ್ರವೇಶವನ್ನು ತಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಧಿವಿಜ್ಞಾನ ಪರಿಣತರು ಕೂಡ ಸ್ಥಳಕ್ಕಾಗಮಿಸಿದ್ದು, ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಅಪರಾಧ ಕೃತ್ಯ ನಡೆದ ಸ್ಥಳದಿಂದ ಬೆರಳಚ್ಚುಗಳನ್ನು ಸಂಗ್ರಹಿಸಲಾಗಿದೆ. ಅಪರಾಧ ಎಸಗಿದ ರಿಷಭ್ ಭದೋರಿಯಾ ಸ್ಥಳದಿಂದ ನಾಪತ್ತೆಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗ್ವಾಲಿಯರ್ನ ತಾಟಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮ ಕಾಲೋನಿಯಲ್ಲಿ ಈ ದುಷ್ಕೃತ್ಯ ನಡೆದಿದೆ. ಸದ್ಯಕ್ಕೆ, ಕೊಲೆಯ ಹಿಂದಿನ ಉದ್ದೇಶವು ಅಸ್ಪಷ್ಟವಾಗಿದೆ ಆದರೆ ಆಪಾದಿತ ಅಪರಾಧದ ಹಿಂದಿನ ನಿಖರವಾದ ಕಾರಣವನ್ನು ತಿಳಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ರಿಷಬ್ ಭದೋರಿಯಾ ಈಗಾಗಲೇ ನಾಲ್ಕು ಕೊಲೆಗಳು ಮತ್ತು ಒಂದು ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.