ಛತ್ತರ್‌ಪುರ (ಮಧ್ಯಪ್ರದೇಶ): ಜಿಲ್ಲೆಯ ಬಮಿತಾ ಪ್ರದೇಶದ ಹೈಯರ್ ಸೆಕೆಂಡರಿ ಶಾಲೆಗೆ ಮುಸುಕುಧಾರಿ ಗೂಂಡಾಗಳ ತಂಡ ನುಗ್ಗಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರಿಗೆ ದೊಣ್ಣೆ ಮತ್ತು ರಾಡ್‌ಗಳಿಂದ ಥಳಿಸಿದ ಘಟನೆ ನಡೆದಿದೆ.
ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ನಡೆದಾಗ ಪ್ರಾಂಶುಪಾಲರು ರಜೆಯಲ್ಲಿದ್ದರು, ಪ್ರಭಾರಿ ಪ್ರಾಂಶುಪಾಲರು ತಡವಾಗಿ ಶಾಲೆಗೆ ಆಗಮಿಸಿದ್ದರು. ಅವರನ್ನು ಹೊರತುಪಡಿಸಿ ಉಳಿದವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ.
ಶಾಲೆಯ ಆಡಳಿತ ಮಂಡಳಿ ಬಮಿತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಘಟನೆಯಲ್ಲಿ ಕಂಪ್ಯೂಟರ್ ಆಪರೇಟರ್ ಕೈ ಮುರಿದಿದೆ. ಬಾಲಕಿಯರಿಗೆ ಗಾಯಗಳಾಗಿವೆ. ಶಾಲೆಯ ಪ್ರಾಂಶುಪಾಲರು ಬಮಿತಾ ಪೊಲೀಸ್ ಠಾಣೆಯ ಉಸ್ತುವಾರಿಗೆ ಲಿಖಿತ ದೂರನ್ನೂ ಕಳುಹಿಸಿದ್ದಾರೆ.
ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಅನಿರುದ್ಧ್ ಶುಕ್ಲಾ ಅವರು ಮೋಟಾರ್ ಸೈಕಲ್ ರಿಪೇರಿ ಮಾಡುವ ಅಂಗಡಿಯನ್ನು ಹೊಂದಿದ್ದಾರೆ ಎಂದು ಬಮಿತಾದ ಟೌನ್ ಇನ್ಸ್‌ಪೆಕ್ಟರ್ ಪರಶುರಾಮ್ ದಬರ್ ಹೇಳಿದ್ದಾರೆ.
ಕೆಲವು ಯುವಕರು ದುರಸ್ತಿಗಾಗಿ ಅವರ ಅಂಗಡಿಗೆ ಮೋಟಾರ್ ಸೈಕಲ್ ನೀಡಿದ್ದರು. ಶುಕ್ಲಾ ಬೈಕ್ ರಿಪೇರಿಗಾಗಿ ಮುಂಗಡವಾಗಿ ಹಣವನ್ನು ತೆಗೆದುಕೊಂಡಿದ್ದರು. ಆದರೆ ಮೋಟಾರ್ ಸೈಕಲ್ ವಿತರಿಸಲಿಲ್ಲ. ಈ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಯುವಕರು ಶುಕ್ಲಾ ಅವರಿಗೆ ಪಾಠ ಕಲಿಸಲು ನಿರ್ಧರಿಸಿದ್ದರು ಎಂದು ಇನ್ಸ್‌ಪೆಕ್ಟರ್ ದಬರ್ ಹೇಳಿದ್ದಾರೆ.