ಇಂದೋರ್: ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಉಜ್ಜಯಿನಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭೆ ಸದಸ್ಯ ಮತ್ತು AICC ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಉಜ್ಜಯಿನಿಯಲ್ಲಿ ನಡೆದ ಘರ್ಷಣೆಯಲ್ಲಿ ಕೆಲವು ಬಿವೈಜೆಎಂ ಸದಸ್ಯರು ಗಾಯಗೊಂಡ 10 ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ದಿಗ್ವಿಜಯ ಸಿಂಗ್ ಮತ್ತು ಕಾಂಗ್ರೆಸ್ ಮಾಜಿ ಸಂಸದ ಪ್ರೇಮಚಂದ್ ಗುಡ್ಡು ಅವರಿಗೆ ವಿಶೇಷ ನ್ಯಾಯಾಲಯ ಶನಿವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮುಖೇಶ್ ನಾಥ್ ಅವರು ಸಿಂಗ್, ಗುಡ್ಡು ಮತ್ತು ಇತರ ನಾಲ್ವರ ಜಾಮೀನು ಅರ್ಜಿಗಳನ್ನು ಸ್ವೀಕರಿಸಿ, ತಲಾ 25,000 ರೂ.ಗಳ ಬಾಂಡ್ ನಲ್ಲಿ ಬಿಡುಗಡೆ ಮಾಡಿದರು. ಜಾಮೀನು ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, ಇದು 10 ವರ್ಷಗಳ ಹಿಂದಿನ ನಕಲಿ ಪ್ರಕರಣ, ಆರಂಭದಲ್ಲಿ ನಮ್ಮ ಹೆಸರುಗಳು ಎಫ್‌ಐಆರ್‌ನಲ್ಲಿ ಇರಲಿಲ್ಲ, ನಂತರ ರಾಜಕೀಯ ಒತ್ತಡದಿಂದ ನಮ್ಮ ಹೆಸರನ್ನು ಸೇರಿಸಲಾಗಿದೆ. ಈ ಶಿಕ್ಷೆಯ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಘಟನೆಯು ಜುಲೈ 2011 ರಂದು ನಡೆದಿದ್ದು, ದಿಗ್ವಿಜಯ್ ಸಿಂಗ್ ಉಜ್ಜಯಿನಿಗೆ ತೆರಳುತ್ತಿದ್ದಾಗ BYJM ಕಾರ್ಯಕರ್ತರ ಗುಂಪು ಬೆಂಗಾವಲು ಪಡೆಗಳನ್ನು ತಡೆದು ಕಪ್ಪು ಬಾವುಟ ತೋರಿಸಿದರು. ಈ ವೇಳೆ ಕಾಂಗ್ರೆಸ್ಸಿಗರು ಬಿಜೆವೈಎಂ ಸದಸ್ಯರಿಗೆ ಥಳಿಸಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ. ಉಜ್ಜಯಿನಿಯ ಜೀವಜಿಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶೇಷ ನ್ಯಾಯಾಲಯವು ಶನಿವಾರ ದಿಗ್ವಿಜಯ್ ಮತ್ತು ಗುಡ್ಡು ಅವರನ್ನು ಐಪಿಸಿ 109 ರ ಅಡಿಯಲ್ಲಿ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಕ್ಕಾಗಿ ದೋಷಿಗಳೆಂದು ಘೋಷಿಸಿತು. ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ತಲಾ 5,000 ರೂ. ದಂಡ ವಿಧಿಸಿದೆ.