ಭೋಪಾಲ್: ಮಧ್ಯಪ್ರದೇಶದ ಗುನಾದಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯ ಮನೆಗೆ ನುಗ್ಗಿ ತೀವ್ರವಾಗಿ ಹಲ್ಲೆ ನಡೆಸಿದ್ದ 10 ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ.
ನಾನಾಖೇಡಿ ಪ್ರದೇಶದಲ್ಲಿ ಅಜಯ್ ಥಾಕಡ್ ಎಂಬ ವ್ಯಕ್ತಿಯ ಮೇಲೆ ಹುಡುಗಿಯ ಮನೆಯವರು ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಆತನ ಪತ್ನಿ ಮತ್ತು ಪುತ್ರ ಬೇಡಿಕೊಂಡರೂ ಹುಡುಗಿಯ ಕುಟುಂಬದವರು ಕರುಣೆ ತೋರದೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ವಿಡಿಯೋ ವೈರಲ್ ಆಗುತ್ತಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕೈಕಾಲಿಗೆ ಹೊಡೆದಿರುವುದರಿಂದ ಗಂಭೀರವಾಗಿ ಗಾಯಗೊಂಡ ಅಜಯ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಯ್ ಧಾಕಡ್ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಗುನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.