ನರ್ಮದಾ ನದಿಯಲ್ಲಿ ಕಳೆದು ಹೋಗಿದ್ದ ಸ್ಥಳೀಯರೊಬ್ಬರ ದೇಹವನ್ನು ಹೊರತೆಗೆಯಲು ಮಧ್ಯ ಪ್ರದೇಶದ ಧರ್ಮಾಪುರಿ (ತಮಿಳುನಾಡಿನ ಧರ್ಮಾಪುರಿ ಅಲ್ಲ) ಶಾಸಕರೊಬ್ಬರು ಸ್ವತಃ ತಾವೇ ನದಿಗೆ ಹಾರಿದ್ದಾರೆ.
ಹನುಮ ಜಯಂತಿಯ ಸಂದರ್ಭದಲ್ಲಿ ನಾಲ್ವರು ನರ್ಮದಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾರೆ. ಆದರೆ ಇವರಲ್ಲಿ ಒಬ್ಬರು, ಕಮ್ಲೇಶ್ ಪಾಟಿದಾರ್ (45), ನದಿಯೊಳಗೆ ಮುಳುಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ನುರಿತ ಈಜುಗಾರರ ಪ್ರಯತ್ನಗಳ ನಡುವೆಯೂ ಕಾಣೆಯಾಗಿರುವ ವ್ಯಕ್ತಿಯ ಸುಳಿವು ಸಿಗಲಿಲ್ಲ.
ಮಹೇಶ್ವರದ ಬಳಿ ಇರುವ ದತ್ತಾಶ್ರಮಕ್ಕೆ ಪ್ರತಿನಿತ್ಯ ಭೇಟಿ ನೀಡುವ ಧರ್ಮಾಪುರಿ ಶಾಸಕ ಪಾಚಿಲಾಲ್ ಮೇದಾ ಘಟನೆ ಬಗ್ಗೆ ತಿಳಿದ ಕೂಡಲೇ ಹಿಂದೂ ಮುಂದೂ ಯೋಚಿಸದೇ ತಾವೇ ನೀರಿಗೆ ಬಿದ್ದಿದ್ದಾರೆ. ಶಾಸಕರು ತಮ್ಮ ಸಹಚರರೊಂದಿಗೆ ನದಿಯೊಳಗೆ 300 ಮೀಟರ್ ಒಳಗೆ ಸಾಗಿದ್ದು ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯ ದೇಹವನ್ನು ಪತ್ತೆ ಮಾಡಿ ದಡಕ್ಕೆ ತಂದಿದ್ದಾರೆ.