ಆಂಬುಲೆನ್ಸ್ ನಲ್ಲಿ ಮೃತದೇಹ ಸಾಗಿಸಲು ದುಬಾರಿ ಹಣ ಕೇಳಿದ್ದರಿಂದ ತಂದೆ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಪರದಾಡಿದ್ದಾರೆ. ಅವರು ಆಂಬುಲೆನ್ಸ್ ತರಲು ಹೋಗಿದ್ದಾಗ. 8 ವರ್ಷದ ಬಾಲಕ 2 ವರ್ಷದ ತಮ್ಮನ ಮೃತದೇಹವನ್ನು ತೊಡೆಮೇಲೆ ಇಟ್ಟುಕೊಂಡು ಕುಳಿತ ಘಟನೆ ಇಡೀ ದೇಶವೇ ತಲೆ ತಗ್ಗಿಸುವಂತಿದೆ.
ಶನಿವಾರ ಮಧ್ಯಪ್ರದೇಶದ ಮೊರೆನಾ ಬೀದಿಯಲ್ಲಿ ಎಂಟು ವರ್ಷದ ಬಾಲಕ ತನ್ನ ಎರಡು ವರ್ಷದ ಕಿರಿಯ ಸಹೋದರನ ಶವದೊಂದಿಗೆ ಕುಳಿತಿರುವುದು ಕಂಡುಬಂದಿದೆ. ಮಕ್ಕಳ ತಂದೆ ಪೂಜಾರಾಮ್ ಜಾಧವ್ ಅವರು ತಮ್ಮ ಮೃತ ಮಗನ ಶವವನ್ನು ಮನೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಗಾಗಿ ಹುಡುಕುತ್ತಿದ್ದರು. ರಸ್ತೆಬದಿಯಲ್ಲಿ ಮೃತದೇಹದೊಂದಿಗೆ ಕುಳಿತಿದ್ದ ಬಾಲಕನನ್ನು ನೋಡಿದ ಜನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಂಬಾಹ್ ನ ಬದ್ಫ್ರಾ ಗ್ರಾಮದ ಪೂಜಾರಾಮ್ ಜಾಧವ್ ಅವರ ಎರಡು ವರ್ಷದ ಮಗ ರಾಜುವಿನ ಆರೋಗ್ಯ ಹದಗೆಟ್ಟಿದ್ದು, ಆರಂಭದಲ್ಲಿ ಮನೆಯಲ್ಲಿಯೇ ಗುಣಪಡಿಸಲು ಪ್ರಯತ್ನಿಸಿ ಹೊಟ್ಟೆ ನೋವು ತಡೆಯಲಸಾಧ್ಯವಾದಾಗ ರಾಜುನನ್ನು ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ಹಿರಿಯ ಮಗ ಗುಲ್ಶನ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ಮೊರೆನಾ ಜಿಲ್ಲಾ ಆಸ್ಪತ್ರೆಯಲ್ಲಿ ರಾಜು ಮೃತಪಟ್ಟಿದ್ದಾನೆ. ಬಡ ಮತ್ತು ಅಸಹಾಯಕ ಪೂಜಾರಾಮ್ ಮೃತದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಆಸ್ಪತ್ರೆಯ ಅಧಿಕಾರಿಗಳ ಮುಂದೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ.
ಆಸ್ಪತ್ರೆಯ ಅಧಿಕಾರಿಗಳು ಆಂಬ್ಯುಲೆನ್ಸ್ ನಿರಾಕರಿಸಿದ ನಂತರ, ತನ್ನ ಮಗುವಿನ ಶವದೊಂದಿಗೆ ಆಸ್ಪತ್ರೆಯಿಂದ ಹೊರಬಂದು ರಸ್ತೆಯ ಮೇಲೆ ಕುಳಿತನು. ಅವನ ಬಳಿ ಯಾವುದೇ ವಾಹನ ಸಿಗಲಿಲ್ಲ. ಅವರ ಬಳಿ ಹೆಚ್ಚಿನ ಹಣವಿರಲಿಲ್ಲ.
ಬೇರೆ ದಾರಿಯಿಲ್ಲದೆ, ಪೂಜಾರಾಮ್ ಜಾತವ್ ಅವರು ತಮ್ಮ ಹಿರಿಯ ಮಗ ಗುಲ್ಶನ್ ಅವರನ್ನು ಆಸ್ಪತ್ರೆಯ ಹೊರಗೆ ಶವದೊಂದಿಗೆ ಬಿಟ್ಟು ಮನೆಗೆ ಮರಳಲು ನಿರ್ಧರಿಸಿದರು.
ಗುಲ್ಶನ್ ಮೃತಪಟ್ಟ ಸೋದರನ ತಲೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅರ್ಧ ಘಂಟೆಯವರೆಗೆ ತನ್ನ ತಂದೆ ಹಿಂದಿರುಗುವ ನಿರೀಕ್ಷೆಯಲ್ಲಿ ಕುಳಿತಿದ್ದನು. ಜನಸಂದಣಿಯಿಂದ ಎಚ್ಚರಗೊಂಡ ಪೊಲೀಸ್ ಅಧಿಕಾರಿಗಳು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಚಾಲಕನನ್ನು ಪೂಜಾರಾಮ್ ಜಾಧವ್ ಅವರ ಮನೆಗೆ ಹೋಗುವಂತೆ ಹೇಳಿದರು.
ಮಗುವಿನ ತಾಯಿ ಮನೆಯಲ್ಲಿಲ್ಲ, ನಾನು ಬಡವನಾಗಿದ್ದು, ನನ್ನ ಮಗು ಏನು ತಿಂದು ಅವನ ಸ್ಥಿತಿ ಹದಗೆಟ್ಟಿದೆ ಎಂದು ನನಗೆ ತಿಳಿದಿಲ್ಲ, ಆಂಬುಲೆನ್ಸ್ ಗಾಗಿ ನಾನು ವೈದ್ಯರನ್ನು ಸಂಪರ್ಕಿಸಿದಾಗ ಹಣ ನೀಡುವಂತೆ ನನ್ನನ್ನು ಕೇಳಲಾಯಿತು ಎಂದು ಹೇಳಿದ್ದಾರೆ.
ಇದೇ ವೇಳೆ ಮೊರೆನಾ ಸಿವಿಲ್ ಸರ್ಜನ್ ವಿನೋದ್ ಗುಪ್ತಾ, ನಾವು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ವಾಹನ ಬರುವಷ್ಟರಲ್ಲಿ ಮಗುವಿನ ತಂದೆ ಹೊರಟು ಹೋಗಿದ್ದರು ಎಂದು ಸಮಜಾಯಿಷಿ ನೀಡಿದ್ದಾರೆ.