ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿರುವ ಘಟನೆ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ವಿದ್ಯಾರ್ಥಿಯೊಬ್ಬ ಮಹಿಳಾ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಈ ಘಟನೆಯಲ್ಲಿ ಪ್ರಾಂಶುಪಾಲೆ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಈ ಹೇಯ ಕೃತ್ಯ ಎಸಗಿದ ವಿದ್ಯಾರ್ಥಿಯನ್ನ ಬಂಧಿಸಿದ್ದಾರೆ.
ಇಂದೋರ್ ಸಿಮೋಲ್ ಪ್ರದೇಶದ ಖಾಸಗಿ ಕಾಲೇಜಾದ ಬಿಎಂ ಫಾರ್ಮಸಿಯ ಪ್ರಾಂಶುಪಾಲೆ, ವಿಮುಕ್ತ ಅವರನ್ನು ಅದೇ ಕಾಲೇಜಿನ ಮಾಜಿ ವಿದ್ಯಾರ್ಥಿ ಅಶುತೋಶ್ ಶ್ರೀವಾಸ್ತವ್ (24) ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.
ಸದ್ಯಕ್ಕೆ ವಿಮುಕ್ತ ಶರ್ಮಾ(54) ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು. ಅವರ ದೇಹ ಭಾಗಶಃ 80% ಸುಟ್ಟು ಹೋಗಿದೆ ಎಂದು ಮಹಾನಿರೀಕ್ಷಕರಾದ ರಾಜೇಶ್ ಗುಪ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿದ್ಯಾರ್ಥಿ ಅಶುತೋಶ್ ಕಾಲೇಜಿನಲ್ಲಿ ಆಗಾಗ ಗಲಾಟೆ ಮಾಡುವುದು, ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ಕಿರುಕುಳ ಕೊಡುವುದನ್ನ ಮಾಡುತ್ತಿದ್ದ. ಆದ್ದರಿಂದ ಆತನ ಮೇಲೆ ಕ್ರಮ ಕೈಗೊಂಡು ನೋಟಿಸ್ ಹೊರಡಿಸಲಾಗಿತ್ತು.
ಇದರಿಂದ ಕೋಪಗೊಂಡ ಆತ ಪ್ರಾಂಶುಪಾಲೆಯ ಮೇಲೆ ಈ ರೀತಿ ದಾಳಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರ ವಿಚಾರಣೆ ಸಮಯದಲ್ಲಿ ವಿದ್ಯಾರ್ಥಿ ಅಶುತೋಶ್, ’ತಾನು ಬಿ ಫಾರ್ಮಾ ವ್ಯಾಸಂಗ ಮಾಡಿದ್ದು, ಕಳೆದ ವರ್ಷ ಜುಲೈನಲ್ಲಿ ನಡೆದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ತನಗೆ ಅಂಕ ಪಟ್ಟಿ ನೀಡಿಲ್ಲ’ ಎಂದು ಹೇಳಿದ್ದಾನೆ. ಇದೇ ವಿಚಾರ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.
ಈ ಹಿಂದೆಯೂ ಅಂಕಪಟ್ಟಿ ವಿಚಾರವಾಗಿ, ವಿದ್ಯಾರ್ಥಿ ಶ್ರೀವಾಸ್ತವ್ ನಾಲ್ಕು ತಿಂಗಳ ಹಿಂದೆ ಪ್ರಾಧ್ಯಾಪರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಪೊಲೀಸರು ಆತನನ್ನ ಬಂಧಿಸಿ ಕೊನೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಈ ಘಟನೆ ನಂತರ ಈಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಸದ್ಯಕ್ಕೆ ಪೊಲೀಸರು ಆತನನ್ನ ಮುಂದೆ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.