ಬೇತಲ್: ಮಧ್ಯಪ್ರದೇಶದ ಬೇತಲ್ ಕ್ಷೇತ್ರದ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಲೋಕಸಭಾ ಅಭ್ಯರ್ಥಿ ಅಶೋಕ್ ಭಾಲವಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾಲವಿ ಅವರ ನಿಧನದಿಂದಾಗಿ ಈ ಹಿಂದೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ನಡೆಯಬೇಕಿದ್ದ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಡಿಎಂ ನರೇಂದ್ರ ಕುಮಾರ್ ಸೂರ್ಯವಂಶಿ ಮಂಗಳವಾರ ಘೋಷಿಸಿದರು.
ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಶೋಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಬಿಎಸ್‌ಪಿ ಅಭ್ಯರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವುದನ್ನು ಬೇತಲ್ ಡಿಎಂ ಖಚಿತಪಡಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ ಮತ್ತು ಏಪ್ರಿಲ್ 26 ರಂದು ನಿಗದಿಯಾಗಿದ್ದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಡಾ. ಮನೀಷ್ ಲಷ್ಕರೆ, ಬಿಎಸ್‌ಪಿ ನಾಯಕನಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಹೇಳಿದ್ದಾರೆ.
ಪ್ರಜಾಪ್ರತಿನಿಧಿ ಕಾಯ್ದೆಯಡಿ ಚುನಾವಣಾ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ನರೇಂದ್ರ ಸಿಂಗ್ ರಘುವಂಶಿ ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಬೇತಲ್‌ನ ಹಾಲಿ ಸಂಸದ ದುರ್ಗಾ ದಾಸ್ ಉಯಿಕೆ ಅವರನ್ನು ಮತ್ತೊಮ್ಮೆ ಕ್ಷೇತ್ರದಿಂದ ಕಣಕ್ಕೆ ಇಳಿಸಿದೆ. ಕಾಂಗ್ರೆಸ್ ರಾಮು ಟೇಕಂ ಅವರನ್ನು ಕಣಕ್ಕಿಳಿಸಿದೆ. ಏಪ್ರಿಲ್ 26 ರಂದು ಚುನಾವಣೆ ನಿಗದಿಯಾಗಿತ್ತು.