ಭೋಪಾಲ್: ಮಧ್ಯಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ 50% ಕಮಿಷನ್ ಆರೋಪ ಮಾಡಿದ್ದ ಹಿನ್ನಲೆಯಲ್ಲಿ ಅವರ ವಿರುದ್ಧ ಮಧ್ಯಪ್ರದೇಶ ಬಿಜೆಪಿ ಕೇಸ್ ದಾಖಲಿಸಿದೆ.
ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಪೋಸ್ಟ್ ನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಂಸದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ‘ಎಕ್ಸ್’ ಖಾತೆಗಳ “ಹ್ಯಾಂಡ್ಲರ್” ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂದೋರ್ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈಗ ಎಕ್ಸ್ ಎಂದು ಕರೆಯಲ್ಪಡುವ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಇಂದೋರ್ ಪೊಲೀಸ್ ಕಮಿಷನರ್, ಶನಿವಾರ ತಡರಾತ್ರಿ ಜ್ಞಾನೇಂದ್ರ ಅವಸ್ತಿ ಎಂಬ ವ್ಯಕ್ತಿಯ ಹೆಸರನ್ನು ಹೊಂದಿರುವ ನಕಲಿ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ ಎಂದು ಸ್ಥಳೀಯ ಬಿಜೆಪಿಯ ಕಾನೂನು ಕೋಶದ ಸಂಚಾಲಕ ನಿಮೇಶ್ ಪಾಠಕ್ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
ನಗರದ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಅವಸ್ಥಿ ಹಾಗೂ ವಾದ್ರಾ, ನಾಥ್ ಮತ್ತು ಅರುಣ್ ಯಾದವ್ ಅವರ ‘ಎಕ್ಸ್’ ಖಾತೆಗಳ “ಹ್ಯಾಂಡ್ಲರ್” ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಪಾಠಕ್ ಅವರ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ 40% ಕಮಿಷನ್ ಸಂಗ್ರಹಿಸುತ್ತಿತ್ತು, ಮಧ್ಯಪ್ರದೇಶದಲ್ಲಿ ಬಿಜೆಪಿ ಭ್ರಷ್ಟಾಚಾರದ ತನ್ನದೇ ದಾಖಲೆಯನ್ನು ಮುರಿದು ಮುನ್ನಡೆದಿದೆ, 40% ಕಮಿಷನ್ ಸರ್ಕಾರವನ್ನು ಕರ್ನಾಟಕದ ಜನರು ಕಿತ್ತೊಗೆದರು, ಈಗ ಮಧ್ಯಪ್ರದೇಶದ 50% ಕಮಿಷನ್ ಸರ್ಕಾರವನ್ನು ಅಧಿಕಾರದಿಂದ ಜನರು ಅದನ್ನು ತೆಗೆದುಹಾಕುತ್ತಾರೆ ಎಂದು ಪ್ರಿಯಾಂಕಾ ಅವರು ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ.
ಕಮಲ್ ನಾಥ್ ಮತ್ತು ಅರುಣ್ ಯಾದವ್ ಕೂಡ ಇದೇ ರೀತಿಯ ಪೋಸ್ಟ್ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿಯವರ ಆರೋಪವನ್ನು ಸುಳ್ಳು ಎಂದು ಹೇಳಿದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಪುರಾವೆ ಕೇಳಿದ್ದಾರೆ. ಇಲ್ಲದಿದ್ದರೆ ಕಾನೂನು ಕ್ರಮಕ್ಕಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿಯ ಮುಂದೆ ಆಯ್ಕೆಗಳು ತೆರೆದಿರುತ್ತವೆ ಎಂದು ಎಚ್ಚರಿಸಿದ್ದಾರೆ.