ಭಾರತೀಯ ಸೇನೆಯ ನಿವೃತ್ತ ಯೋಧ ಹಾಗೂ ಆತನ ಪತ್ನಿ ಇಪ್ಪತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗನ್ನು ಕಳೆದುಕೊಂಡ ಗಂಟೆಯೊಳಗೆ ಅದನ್ನು ಮರಳಿ ಪಡೆದ ಘಟನೆಯೊಂದು ಮಧ್ಯ ಪ್ರದೇಶ ಕಿಶಾನ್ಗಂಜ್ ಪೊಲೀಸ್ ಠಾಣೆಯಲ್ಲಿ ಜರುಗಿದೆ.
ನಿವೃತ್ತ ಯೋಧ ಎಂಕೆ ಸಿಂಗ್ ಹಾಗೂ ಅವರ ಪತ್ನಿ ಕುಸುಮ್ ಇಂದೋರ್ನಿಂದ ಮ್ಹೋಗೆ ಬಸ್ ಒಂದರಲ್ಲಿ ತೆರಳುತ್ತಿದ್ದರು. ಈ ವೇಳೆ ಆಭರಣ ಇದ್ದ ಬ್ಯಾಗನ್ನು ಸೀಟಿನಡಿ ಇಟ್ಟಿದ್ದರು. ಸ್ವಲ್ಪ ದೂರ ಸಾಗುತ್ತಲೇ ಆಭರಣದ ಬ್ಯಾಗ್ ನಾಪತ್ತೆಯಾಗಿದ್ದನ್ನು ಕಂಡ ದಂಪತಿ ಕೂಡಲೇ ಬಸ್ಸನ್ನು ಕಿಶಾನ್ಗಂಜ್ ಪೊಲೀಸ್ ಠಾಣೆಗೆ ಕೊಂಡೊಯ್ಯಲು ನಿರ್ವಾಹಕರಿಗೆ ಸೂಚಿಸಿದ್ದಾರೆ. ಠಾಣಾಧಿಕಾರಿ ಕುಲ್ದೀಪ್ ಖಾಟ್ರಿಗೆ ದಂಪತಿ ತಮ್ಮ ಸಮಸ್ಯೆಯನ್ನು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಕೂಡಲೇ ಬಸ್ ನಲ್ಲಿದ್ದ ಸಿಸಿ ಟಿವಿ ರೆಕಾರ್ಡಿಂಗ್ ಅನ್ನು ಪರಿಶೀಲಿಸಿದ ಪೊಲೀಸರು, ಬಸ್ಸು ನಿಲ್ಲಿಸಿದ ಸ್ಥಳಗಳಲ್ಲಿ ಏನಾಗಿದೆ ಎಂದು ತಿಳಿಯಲು ನಿಲುಗಡೆಗಳ ಬಳಿ ಇದ್ದ ಅಂಗಡಿ ಮುಂಗಟ್ಟುಗಳ ಸಿಸಿ ಟಿವಿ ರೆಕಾರ್ಡಿಂಗ್ಗಳನ್ನು ವೀಕ್ಷಿಸಿದ್ದಾರೆ.
ಉಮೇಮರಿಯಾ ಎಂಬ ನಿಲುಗಡೆಯಲ್ಲಿ ಕುಟುಂಬವೊಂದು ಆಭರಣವಿದ್ದ ಬ್ಯಾಗನ್ನು ಕೊಂಡೊಯ್ದಿದೆ ಎಂದು ಪತ್ತೆ ಮಾಡಿದ ಪೊಲೀಸರು ಆ ಕುಟುಂಬವನ್ನು ಪತ್ತೆ ಮಾಡಿ ಬ್ಯಾಗನ್ನು ಮರಳಿ ಪಡೆದಿದ್ದಾರೆ.
ಎರಡೂ ಕುಟುಂಬಗಳು ಒಂದೇ ಬಣ್ಣದ ಬ್ಯಾಗನ್ನು ಕೊಂಡೊಯ್ದಿದ್ದು, ಸಿಂಗ್ರ ಬ್ಯಾಗನ್ನು ತಮ್ಮ ಬ್ಯಾಗೆಂದು ಆ ಕುಟುಂಬ ಹಾಗೆ ಕೊಂಡೊಯ್ದಿದೆ ಎಂದು ಬಳಿಕ ತಿಳಿದು ಬಂದಿದೆ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.