ಕುಟುಂಬವನ್ನು ಧಿಕ್ಕರಿಸಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಯುವತಿ ನಿರ್ಧಾರ ವಿರೋಧಿಸಿ ಮಧ್ಯಪ್ರದೇಶದ ಜಬಲ್‌ಪುರದಲ್ಲಿನ ಹಿಂದೂ ಕುಟುಂಬವೊಂದು ತಮ್ಮ ಪಾಲಿಗೆ ಮಗಳು ಸತ್ತಳೆಂದು ಪಿಂಡದಾನ ಮಾಡಿದೆ.
ಜೂನ್ 8 ರಂದು ಅಮ್ಖೇರಾ ಪ್ರದೇಶದ ಅನಾಮಿಕಾ ದುಬೆ ಎಂಬ ಹುಡುಗಿ ಜಬಲ್ಪುರದಲ್ಲಿ ಮೊಹಮ್ಮದ್ ಅಯಾಜ್ ಎಂಬ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದರು. ಮದುವೆ ಕಾರ್ಡ್‌ನಲ್ಲಿ ಆಕೆಯ ಹೆಸರನ್ನು ಉಜ್ಮಾ ಫಾತಿಮಾ ಎಂದು ಬದಲಾಯಿಸಿದ್ದು ಆಕೆಯ ಪೋಷಕರಿಗೆ ತಿಳಿದಿತ್ತು. ಮದುವೆ ಆಹ್ವಾನ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಯುವತಿಯ ಪೋಷಕರು ಸೇರಿದಂತೆ ಆಕೆಯ ಒಡಹುಟ್ಟಿದವರು ಅಂತರ್ ಧರ್ಮೀಯ ಮದುವೆ ನಿರ್ಧಾರವನ್ನು ವಿರೋಧಿಸಿ ಆಕೆ ಸತ್ತಿದ್ದಾಳೆಂದು ಶ್ರದ್ಧಾಂಜಲಿ ಪತ್ರಗಳನ್ನು ವಿತರಿಸಿದರು. ಜೊತೆಗೆ ನರ್ಮದಾ ನದಿ ತೀರದಲ್ಲಿ ಆಕೆಯ ಅಂತ್ಯಕ್ರಿಯೆಯ ಆಚರಣೆಗಳನ್ನು ನಡೆಸಿದರು.
ಆಕೆಯೊಂದಿಗೆ ನಮ್ಮ ಕುಟುಂಬ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿವೆ. ಅವಳನ್ನು ಸಂಪೂರ್ಣ ನಿರಾಕರಿಸುವುದು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಕುಟುಂಬವು ಪಿಂಡದಾನ ಮಾಡಿದೆ.