ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಮಂಗಳವಾರ 31,443 ಪ್ರಕರಣಗಳು ದಾಖಲಾಗಿವೆ. ಇದು ಕಳೆದ 118 ದಿನಗಳಲ್ಲಿ ಅತಿ ಕಡಿಮೆ. ಚೇತರಿಕೆ ದರದಲ್ಲಿಯೂ ಭಾರಿ ಏರಿಕೆ ಕಂಡು ಬಂದಿದೆ. ಕೊರೊನಾ ಒಟ್ಟು ಪ್ರಕರಣದ ಸಂಖ್ಯೆ ಸಹ 4.31 ಲಕ್ಷಕ್ಕೆ ಇಳಿದಿದೆ. ಇದು 109 ದಿನಗಳಲ್ಲಿ ಅತ್ಯಂತ ಕಡಿಮೆ. ಆದರೆ ಇಂದು ಸಾವಿನ ಅಂಕಿಅಂಶಗಳು ಆಘಾತವನ್ನುಂಟು ಮಾಡಿದೆ.
ಕೊರೊನಾ ಸಾವಿನ ಸಂಖ್ಯೆ ದೇಶಾದ್ಯಂತ ಎರಡು ಸಾವಿರ ದಾಟಿದೆ. ಇದು ಎಲ್ಲರ ಭಯಕ್ಕೆ ಕಾರಣವಾಗಿದೆ. ಸಾವಿನ ಸಂಖ್ಯೆ ಹಠಾತ್ ದ್ವಿಗುಣಗೊಳ್ಳಲು ಕಾರಣವೇನು ಎಂಬ ಪ್ರಶ್ನೆ ಕಾಡಿದೆ. ಈ ಹೆಚ್ಚಳಕ್ಕೆ ಕಾರಣ ಮಧ್ಯಪ್ರದೇಶ ಎಂಬುದು ಗೊತ್ತಾಗಿದೆ. ಹಲವು ದಿನಗಳಲ್ಲಿ ಸಂಭವಿಸಿದ ಸಾವಿನ ಅಂಕಿಯನ್ನು ಏಕಕಾಲದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಕಳೆದ 24 ಗಂಟೆಯಲ್ಲಿ ಮಧ್ಯಪ್ರದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 1,481 ಎಂದು ವರದಿಯಾಗಿದೆ. ಇದರಲ್ಲಿ ಕೆಲವು ದಿನಗಳ ಡೇಟಾವನ್ನು ಸೇರಿಸಲಾಗಿದೆ. ಮಹಾರಾಷ್ಟ್ರದಲ್ಲಿ 146 ಮತ್ತು ಕೇರಳದಲ್ಲಿ 100 ಸಾವುಗಳು ಸಂಭವಿಸಿವೆ. ಇದಕ್ಕೆ ಮಧ್ಯಪ್ರದೇಶದ ಸಾವಿನ ಸಂಖ್ಯೆ ಸೇರಿಸಿದ ಕಾರಣ ಸಂಖ್ಯೆ 2 ಸಾವಿರ ದಾಟಿದೆ. ಮಧ್ಯಪ್ರದೇಶದಲ್ಲಿ ಕೊರೊನಾಕ್ಕೆ ಒಟ್ಟು 10,506 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.