ಮಧ್ಯಪ್ರದೇಶದ ಇಂದೋರ್ ನಗರದ ಸಮೀಪವಿರುವ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ರತಿಭಾ ಸಿಂಟೆಕ್ಸ್ ಲಿಮಿಟೆಡ್ ಜವಳಿ ಕಂಪನಿ ತನ್ನ ಉದ್ಯೋಗಿಗಳ ಕನಸು ಈಡೇರಿಸಿದೆ. ಸಾಗೌರ್ ಕುಟಿಯ ಪಟ್ಟಣದಲ್ಲಿ ಒಂದು ಬೆಡ್ ರೂಮ್ ನ ಮನೆಯನ್ನು ಉಡುಗೊರೆಯಾಗಿ ನೀಡಿದೆ. 25 ಸಾವಿರದವರೆಗೆ ಸಂಬಳ ಪಡೆಯುವ 28 ಉದ್ಯೋಗಿಗಳ ಕನಸನ್ನು ಈಡೇರಿಸಿದೆ.
ಕಂಪನಿಯ 28 ಉದ್ಯೋಗಿಗಳಲ್ಲಿ 14 ಮಹಿಳೆಯರು ಸೇರಿದ್ದಾರೆ. ಕೆಲ ಸಮಯದ ಹಿಂದೆ ಕಂಪನಿ ಉದ್ಯೋಗಿಗಳ ಸಮೀಕ್ಷೆ ನಡೆಸಿತ್ತು. ಉದ್ಯೋಗಿಗಳ ಕನಸೇನು ಎಂಬುದನ್ನು ಕೇಳಿತ್ತು. ಅದ್ರಲ್ಲಿ ಬಹುತೇಕರು ಸ್ವಂತ ಮನೆ ನಮ್ಮ ಕನಸು ಎಂದಿದ್ದರು. ಅನೇಕ ವರ್ಷಗಳಿಂದ ಕಡಿಮೆ ಸಂಬಳದಲ್ಲಿ ಕಂಪನಿಗೆ ಕೆಲಸ ಮಾಡುತ್ತಿರುವ ಕೆಲ ಉದ್ಯೋಗಿಗಳನ್ನು ಕಂಪನಿ ಆಯ್ಕೆ ಮಾಡಿತ್ತು.
ನೌಕರರಿಗಾಗಿ ಸ್ವಂತ ಮನೆ ನಿರ್ಮಿಸಿದ ಕಂಪನಿ, ಮನೆ ಕೀಯನ್ನು ನೌಕರರಿಗೆ ಹಸ್ತಾಂತರಿಸಿದೆ. ಕಂಪನಿ ಅಧ್ಯಕ್ಷ ಎಸ್.ಕೆ.ಚೌಧರಿ, ತಂದೆ ಚೋಗ್ಮಲ್ ಚೌಧರಿ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಈ ಉಡುಗೊರೆಯನ್ನು ನೀಡಿದ್ದಾರೆ. ನೌಕರರ ಮಕ್ಕಳಿಗೆ ಕಂಪನಿ ವಿದ್ಯಾರ್ಥಿ ವೇತನವನ್ನೂ ನೀಡ್ತಿದೆ. 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸನ್ಮಾನ ಕೂಡ ಮಾಡಿದೆ. ನೌಕರರ ಜೊತೆ ಭಾವನಾತ್ಮಕ ಸಂಬಂಧ ಹೊಂದುವುದು ನಮ್ಮ ಕಂಪನಿ ಉದ್ದೇಶವೆಂದು ಚೌಧರಿ ಹೇಳಿದ್ದಾರೆ.