ತುಮಕೂರು: ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಫೋಟೋ ಹಾಕಿ ಸಂಭ್ರಮಾಚರಣೆ ನಡೆಸಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಧುಗಿರಿಯ ದಂಡಿನ ಮಾರಮ್ಮ ದೇವಾಲಯ ಸಮೀಪ ಗೋಡ್ಸೆ ಫೋಟೋ ಹಾಕಿದ್ದ ರಾಮಪ್ಪ, ಮುದ್ದುಕೃಷ್ಣ, ಲಕ್ಷ್ಮಣ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇವರು ಭಗತ್ ಸಿಂಗ್ ಯೂಥ್ ಅಸೋಸಿಯೇಷನ್ ಹೆಸರಿನಲ್ಲಿ ಡಿಎಂ ಬಾಯ್ಸ್ ಎಂದು ಫ್ಲೆಕ್ಸ್ ನಲ್ಲಿ ಬರೆಸಿ ಹಾಕಿದ್ದರು. ಇದರಲ್ಲಿ ಗೋಡ್ಸೆ ಫೋಟೋವನ್ನು ದೊಡ್ಡದಾಗಿ ಹಾಕಿ ಸಂಭ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಮೂವರನ್ನು ವಶಕ್ಕೆ ಪಡೆದು ತಹಶೀಲ್ದಾರ್ ಎದುರು ಹಾಜರುಪಡಿಸಲಾಗಿದೆ.
ನಮಗೆ ಗೋಡ್ಸೆ ಯಾರು ಎಂಬುದು ಗೊತ್ತಿರಲಿಲ್ಲ. ಇಂಟರ್ ನೆಟ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿದಾಗ ಅಲ್ಲಿ ದೊರೆತ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡು ಫ್ಲೆಕ್ಸ್ ಮಾಡಿಸಿ ಅಳವಡಿಸಲಾಗಿತ್ತು. ನಂತರ ತಪ್ಪಿನ ಅರಿವಾಗಿ ಫ್ಲೆಕ್ಸ್ ತೆರವುಗೊಳಿಸಿದ್ದೇವೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ತಹಶೀಲ್ದಾರ್ ಎದುರು ಈ ಮೂವರು ಮನವಿ ಮಾಡಿದ್ದಾರೆ.
ತಹಶೀಲ್ದಾರ್ ಸುರೇಶ್ ಆಚಾರ್, ಮುಂದಿನ ದಿನಗಳಲ್ಲಿ ಈ ರೀತಿ ಮಾಡಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದು, ಮುಚ್ಚಳಿಕೆ ಪತ್ರ ಬರೆಸಿಕೊಂಡು ಅವರನ್ನು ಬಿಟ್ಟು ಕಳುಹಿಸಲಾಗಿದೆ.