ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಬಿಜೆಪಿ ಸರ್ಕಾರ ಮಾಡಿದ ಬದಲಾವಣೆ ತಿದ್ದುಪಡಿ ಮಾಡಲಿದ್ದು, ಇದಕ್ಕಾಗಿ ಸಮಿತಿ ರಚಿಸುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಾಲೆ ಶುರುವಾಗಿರುವುದರಿಂದ ಪುಸ್ತಕ ಪರಿಷ್ಕರಣೆ ಅಸಾಧ್ಯ. ಹೀಗಾಗಿ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಲಿದ್ದು, ಹಂತ ಹಂತವಾಗಿ ಪರಿಷ್ಕರಣೆಗೆ ಸಮಿತಿ ರಚಿಸಲಾಗುವುದು ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಮಧು ಬಂಗಾರಪ್ಪ, ಶಾಲೆಗಳು ಈಗಷ್ಟೇ ಆರಂಭವಾಗಿದ್ದು, ಈ ಪಠ್ಯಪುಸ್ತಕ ಪರಿಷ್ಕರಿಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು. ವರದಿ ಪಡೆದು ಸಂಪೂರ್ಣ ಪಠ್ಯಪುಸ್ತಕ ಪರಿಷ್ಕರಣೆ ಬದಲು ಕೇಸರಿಕರಣವನ್ನು ತೆಗೆದುಹಾಕುವ ಕುರಿತು ಸಿಎಂ ಬಳಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಪಠ್ಯ ಪರಿಷ್ಕರಣೆ ಮಾಡುವುದಾಗಿ ನಮ್ಮ ಪ್ರಣಾಳಿಕೆಯಲ್ಲೇ ಘೋಷಿಸಿದ್ದು, ಹಂತ ಹಂತವಾಗಿ ಶಾಲಾ ಪಠ್ಯ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.