ಬೆಳಗಾವಿ(ಸುವರ್ಣಸೌಧ): ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಶಿಕ್ಷಕರ ಕೊರತೆಯನ್ನು ತುಂಬುವುದರ ಜೊತೆಗೆ ಈ ಭಾಗದ ಶಾಲೆಗಳಿಗೆ ಅಗತ್ಯವಿರುವ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಆದ್ಯತೆಯಲ್ಲಿ ಒದಗಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.
ವಿಧಾನಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ಶಶೀಲ್ ನಮೋಶಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲಾ ಶಿಕ್ಷಣ ಆಯುಕ್ತಾಲಯದಲ್ಲಿ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ಸಿಬ್ಬಂದಿಗಳ ವರ್ಗಾವಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಪ್ರಾಥಮಿಕ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಕುರಿತಂತೆ ಸದಸ್ಯ ಎಸ್.ವಿ. ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್. ಮಧು ಬಂಗಾರಪ್ಪ ಅವರು, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಖಾಲಿ ಇರುವ 2120 ದೈಹಿಕ ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 2500 ಹುದ್ದೆಗಳ ಭರ್ತಿ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಸಮಾಲೋಚನೆಯಲ್ಲಿದೆ. ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರನ್ನು ಆದಷ್ಟು ಶೀಘ್ರದಲ್ಲಿ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.