ಬೆಂಗಳೂರು: ವ್ಯಾಜ್ಯ ಇತ್ಯರ್ಥವಾದ ತಕ್ಷಣ 13000 ಶಿಕ್ಷಕರಿಗೆ ನೇಮಕಾತಿ ಪತ್ರ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿಯ ಬಿ.ವೈ. ವಿಜಯೇಂದ್ರ ಮತ್ತು ಮಹೇಶ್ ಟೆಂಗಿನಕಾಯಿ ಅವರು ಮಾಡಿದ ಪ್ರಸ್ತಾಪಕ್ಕೆ ಸಚಿವರು ಉತ್ತರ ನೀಡಿದ್ದಾರೆ.
ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವ ಶಿಕ್ಷಕರ ನೇಮಕಾತಿ ಪ್ರಕರಣ ಇತ್ಯರ್ಥವಾದ ಕೂಡಲೇ 13,000 ಮಂದಿಗೆ ನೇಮಕಾತಿ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ.
ಕಳೆದ ವರ್ಷ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, 13,312 ಮಂದಿ ಆಯ್ಕೆಯಾಗಿದ್ದಾರೆ. ನೇಮಕಾತಿ ಪತ್ರ ನೀಡುವ ಮೊದಲು ಕೆಲವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಕರಣ ಇತ್ಯರ್ಥಗೊಳಿಸುವಂತೆ ಅಡ್ವೊಕೇಟ್ ಜನರಲ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ನೇಮಕಾತಿ ಪತ್ರ ನೀಡಲು ವಿಳಂಬವಾದರೂ ಉಳಿದ ಪ್ರಕ್ರಿಯೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಪೊಲೀಸ್ ಪರಿಶೀಲನೆ, ದಾಖಲೆ ಪರಿಶೀಲನೆ ಸೇರಿ ಉಳಿದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.