ಶಿವಮೊಗ್ಗ: ಮಕ್ಕಳು ಖುಷಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದುವಂತಹ ವಾತಾವರಣವನ್ನು ರೂಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಗೆ, ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಂಯುಕ್ತಾಶ್ರಯದಲ್ಲಿ ಇಂದು ಹರಿಗೆಯ ಸರ್ಕಾರಿ ಪ್ರಾಥಮಿಕ ಶಾಲೆಯ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕಲಿಕೆ ಹಾಗೂ ಮೂಲಭೂತ ಸೌಕರ್ಯಗಳೆಡೆಯೂ ಹೆಚ್ಚಿನ ಗಮನ ನೀಡುತ್ತಿದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಮೊಟ್ಟೆ/ಚಿಕ್ಕಿ ನೀಡಲಾಗುತ್ತಿದೆ. ಹಾಗೂ ಡಿಸೆಂಬರ್ ಮಾಹೆಯಿಂದ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ನೀರನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಗೃಹಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ಜನರಿಗೆ ಸಹಕಾರಿಯಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ನಾವು ಅತ್ಯುತ್ತಮ ಶಿಕ್ಷಕರನ್ನು ಕಾಣಬಹುದಾಗಿದ್ದು, ಅವರು ಶ್ರಮವಹಿಸಿ ಉತ್ತಮ ಅಂಕ ಪಡೆದು ಆಯ್ಕೆಯಾಗಿರುತ್ತಾರೆ. ಇಂತಹ ಶಿಕ್ಷಕರು ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಶಾಲಾ ಅವಧಿ ಮೀರಿ ತರಗತಿ/ಕೋಚಿಂಗ್ ನೀಡುವ ಮೂಲಕ ಅವರ ಉತ್ತಮ ಭವಿಷ್ಯಕ್ಕೆ ಸಹಕರಿಸಬೇಕು. ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಟ್ಯೂಷನ್ ಕಳುಹಿಸುವುದು ಮನೆಯಲ್ಲಿ ಪೊಷಕರು ಮಕ್ಕಳಿಗೆ ಪಾಠ ಹೇಳಿಕೊಡುವುದು ಕಷ್ಟ. ಆದ್ದರಿಂದ ಶಾಲೆಯಲ್ಲಿಯೇ ಶಾಲಾ ಅವಧಿ ಮುಗಿದ ನಂತರ ಪಾಠ ಹೇಳಿಕೊಡಬೇಕೆಂದು ಮನವಿ ಮಾಡಿದರು.
ಡಿಡಿಪಿಐ, ಎಸ್.ಡಿ.ಎಂ.ಸಿ. ಜತೆ ಚರ್ಚಿಸಿ ಅನುದಾನ ನೀಡಿ ಹೊಸ ಕಟ್ಟಡ, ಕೊಠಡಿ ನೀಡಲು ಪ್ರಯತ್ನ ಮಾಡುತ್ತೇನೆ. ಶಾಲೆಗೆ 75 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಇಂತದ್ದೊಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಷಯ. ಇಲ್ಲಿ 1 ರಿಂದ 7 ನೇ ತರಗತಿವರೆಗೆ 130 ವಿದ್ಯಾರ್ಥಿಗಳು ದಾಖಲಾತಿ ಹೊಂದಿರುವುದು ಒಂದು ಸಾಧನೆ. ಶಾಲೆಯ ಅಭಿವೃದ್ದಿಗೆ ದಾನಿಗಳ, ಹಳೆಯ ವಿದ್ಯಾರ್ಥಿಗಳ ಸಹಕಾರಕ್ಕೆ ಋಣಿಯಾಗಿರಬೇಕು ಎಂದರು.
ರಾಜ್ಯದಲ್ಲಿ ಅಗತ್ಯ ಮಾನದಂಡಗಳಿಗೆ ಒಳಪಡುವ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಒತ್ತು ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆ. ಹರಿಗೆ ಶಾಲೆ ಅತ್ಯಂತ ಹಳೆಯದಾಗಿದ್ದು, ಹೊಸ ಕಟ್ಟಡ ನಿರ್ಮಿಸಲು ಅಂದಾಜು ಪಟ್ಟಿ ಸಲ್ಲಿಸಿದ್ದೀರಿ. ಡಿಡಿಪಿಐ, ಎಸ್‍ಡಿಎಂಸಿ ಜೊತೆ ಚರ್ಚಿಸಿ ಹೊಸ ಕಟ್ಟಡ, ಕೊಠಡಿಗಳ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಶಾಲಾ ಶಿಕ್ಷಕರು, ಎಸ್‍ಡಿಎಂಸಿ, ಹಳೆವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಚಿವರೊಂದಿಗೆ ಹೊಸ ಕಟ್ಟಡ ಬೇಡಿಕೆಯ ನೀಲಿ ನಕಾಶೆಯನ್ನು ಬಿಡುಗಡೆಗೊಳಿಸಿದರು. ರೂ. 1.5 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.
ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಸನ್ನ ಕುಮಾರ್, ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್, ಪಾಲಿಕೆ ಮಾಜಿ ಸದಸ್ಯರಾದ ಸತ್ಯನಾರಾಯಣ್, ಆರ್.ಸಿ. ನಾಯ್ಕ, ಮುಖಂಡರಾದ ವೈ.ಹೆಚ್.ನಾಗರಾಜ್, ಶ್ರೀನಿವಾಸ ಕರಿಯಣ್ಣ, ಕಲಗೋಡು ರತ್ನಾಕರ, ರಾಮೇಗೌಡ, ಡಿಡಿಪಿಐ ಪರಮೇಶ್ವರಪ್ಪ, ಬಿಇಓ ನಾಗರಾಜ್ ಇತರರು ಹಾಜರಿದ್ದರು.