ಬೆಂಗಳೂರು: ಮುಂದಿನ ವರ್ಷದೊಳಗೆ ರಾಜ್ಯದಲ್ಲಿ 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಯಿಂದ ದೊಡ್ಡಬಳ್ಳಾಪುರದ ವಿಶ್ವನಾಥಪುರದಲ್ಲಿ ಏರ್ಪಡಿಸಿದ್ದ ನನ್ನ ಶಾಲೆ ನನ್ನ ಕೊಡುಗೆ ಯೋಜನೆಯಡಿ ಸಿಎಸ್ಆರ್ ಅನುದಾನದಲ್ಲಿ ಮಾದರಿ ಸರ್ಕಾರಿ ಶಾಲೆಗೆ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
1ರಿಂದ 12ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿಯಲು ಅವಕಾಶ ಕಲ್ಪಿಸಲು ಮತ್ತು ಅಗತ್ಯ ಮೂಲ ಸೌಕರ್ಯ ಒಳಗೊಂಡ 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮುಂದಿನ ವರ್ಷದ ವೇಳೆಗೆ ರಾಜ್ಯಾದ್ಯಂತ ಆರಂಭಿಸುವುದಾಗಿ ತಿಳಿಸಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ಎರಡು ಗ್ರಾಮಗಳಿಗೆ ಒಂದರಂತೆ 2,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಿಎಸ್ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.