ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಮೂರು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶನಿವಾರ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ 105ನೇ ರಾಜ್ಯ ಪರಿಷತ್ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಕಡೆಯಿಂದಲೂ ಕೆಪಿಎಸ್ ಶಾಲೆಗಳಿಗೆ ಬೇಡಿಕೆ ಇದೆ. ಮುಂದಿನ ವರ್ಷ ಕೆಪಿಎಸ್ ಶಾಲೆಗಳ ಸಂಖ್ಯೆಯನ್ನು 500 ರಿಂದ 600 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮೂರು ವರ್ಷದಲ್ಲಿ ಮೂರು ಸಾವಿರ ಕೆಪಿಎಸ್ ಶಾಲೆಗಳನ್ನು ಆರಂಭಿಸಿ ಸಿಎಸ್ಆರ್ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕೆಪಿಎಸ್ ನಲ್ಲಿ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುಸಿವರೆಗೆ ಇರುವಂತೆ ನೋಡಿಕೊಳ್ಳಲಿದ್ದು, ಪಾಠದ ಜೊತೆಗೆ ಕ್ರೀಡೆ, ಕಲೆ, ಸಂಗೀತ ಮೊದಲಾದ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಕೆಪಿಎಸ್ ಶಾಲೆಗಳಲ್ಲಿ ಸ್ಕೌಟ್ ಮತ್ತು ಗೈಡ್ಸ್ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.