ಕಲಬುರಗಿ: ಪ್ರಸಕ್ತ 2024-25ನೇ ಸಾಲಿನ ಆಯವ್ಯದಲ್ಲಿ ರಾಜ್ಯದಾದ್ಯಂತ 500 ಕರ್ನಾಟಕ ಪಬ್ಲಿಕ್ ಆರಂಭಿಸಲು ಘೋಷಿಸಿದ್ದು, ಇದರಲ್ಲಿ 137 ಶಾಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರಂಭವಾಗಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಕೆ.ಕೆ.ಆರ್.ಟಿ.ಬಿ. ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ 297 ಕೆ.ಪಿ.ಎಸ್. ಶಾಲೆ ಇದ್ದು, ಇದರ ಜೊತೆಗೆ ಈ ವರ್ಷ 500 ಶಾಲೆ ಆರಂಭಿಸಲಾಗುವುದು ಎಂದರು.
ದ್ವಿಭಾಷಾ ಬೋಧನೆ, ವಿಷಯ ಶಿಕ್ಷಕರ ಜೊತೆಗೆ ದೈಹಿಕ, ಸಂಗೀತ ಶಿಕ್ಷಕರು, ಉತ್ತಮ ಮೂಲಸೌಕರ್ಯ, ಶಾಲಾ ಮೈದಾನ ಪರಿಕಲ್ಪನೆ ಒಳಗೊಂಡಿರುವ ಕೆ.ಪಿ.ಎಸ್. ಶಾಲೆಗೆ ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ 3 ವರ್ಷದಲ್ಲಿ ಎರಡು ಗ್ರಾಮ ಪಂಚಾಯತಿಗಳಿಗೆ ತಲಾ ಒಂದರಂತೆ 3,000 ಕೆ.ಪಿ.ಎಸ್. ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಯಿಂದ ವಿಮುಖ ಮಾಡಿದವರನ್ನು ಮತ್ತೆ ಸರ್ಕಾರಿ ಶಾಲೆಯತ್ತ ಸೆಳೆಯುವುದರ ಜೊತೆಗೆ ದ್ವಿಭಾಷಾ ಬೋಧನೆಯಲ್ಲಿ ಮಕ್ಕಳು, ಪಾಲಕರಿಗೆ ಅವರ ಆಯ್ಕೆಯ ಭಾಷೆಯಲ್ಲಿಯೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ರಾಜ್ಯದ್ಯಾಂತ ಇರುವ ಆದರ್ಶ ವಿದ್ಯಾಲಯದಲ್ಲಿ 11 ಮತ್ತು 12ನೇ ತರಗತಿ ಬೋಧನೆಗೆ ಈಗಾಗಲೆ ಆದೇಶ ಹೊರಡಿಸಿದೆ. ಶಾಲೆಗಳಿಗೆ ಮ್ಯಾನೇಜ್‍ಮೆಂಟ್ ಅನುದಾನ ಇಲ್ಲದೆ ಶಾಲೆಗೆ ನೀಡಲಾದ ಗಣಕಯಂತ್ರಗಳು ಧೂಳು ತಿನ್ನುತ್ತಿದ್ದವು. ಗೃಹ ಜ್ಯೋತಿ ಯೋಜನೆಯಡಿ ಕಳೆದ ನವೆಂಬರ್ 1 ರಿಂದ ಶಾಲೆಗಳಿಗೆ ಉಚಿತ ವಿದ್ಯುತ್ ಘೋಷಣೆ ಪರಿಣಾಮ ಸ್ಮಾರ್ಟ್ ಕ್ಲಾಸ್ ನಡೆಯುತ್ತಿದ್ದು, ಗಣಕಯಂತ್ರಗಳು ಮಕ್ಕಳ ಉಪಯೋಗಕ್ಕೆ ಬಂದಿವೆ. ಇದಲ್ಲದೆ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನಿರ್ವಹಣಾ ವೆಚ್ಚ 20 ರಿಂದ 40 ಸಾವಿರ ರೂ. ಗಳಿಗೆ ಅನುದಾನ ಹೆಚ್ಚಿಸಿದೆ. ಈ ಹಿಂದೆ 8ನೇ ತರಗತಿ ವರೆಗೆ ಶಾಲಾ ಮಕ್ಕಳಿಗೆ ವಾರದಲ್ಲಿ ಒಮ್ಮೆ ಮೊಟ್ಟೆ ನೀಡಲಾಗುತ್ತಿತ್ತು, ನಮ್ಮ ಸರ್ಕಾರ ಬಂದ ನಂತರ ವಾರದಲ್ಲಿ 2 ಬಾರಿ ಮೊಟ್ಟೆ ನೀಡಲಾಗುತ್ತಿದ್ದು, ಇದನ್ನು 10ನೇ ತರಗತಿವರೆಗೆ ವಿಸ್ತರಿಸಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರ ನೀಡುವತ್ತ ಸಹ ಇಲಾಖೆ ಗಮನಹರಿಸುತ್ತಿದೆ ಎಂದರು.
ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಫಲಿತಾಂಶ ಸುಧಾರಣೆಯಾಗಬೇಕು, ಮಕ್ಕಳು ಸರ್ವಾಂಗಿಣ ವಿಕಸನ ಹೊಂದಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಅಜೀಂ ಪ್ರೇಮಜಿ ಫೌಂಡೇಷನ್ ಮತ್ತು ಟೋಯೋಟಾ ಸಂಸ್ಥೆಗಳು ತಮ್ಮ ಸಿ.ಎಸ್.ಆರ್. ನಿಧಿಯಡಿ ಬರುವ ಮೇ ಮಾಹೆಯಿಂದ ಮುಂದಿನ ಮಾರ್ಚ್ ವರೆಗೆ ರಾಜ್ಯದ 20 ಸಾವಿರ ಶಿಕ್ಷಕರಿಗೆ ವೃತ್ತಿ, ಬೋಧನ ಕೌಶಲ್ಯ ಹೆಚ್ಚಿಸುವ ತರಬೇತಿ ನೀಡಲಿದೆ ಎಂದರು.
ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯನ್ನು ಒಂದೇ ತಿಂಗಳಿನಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವುದರಿಂದ ಪರೀಕ್ಷೆಯ ಗಾಂಭೀರ್ಯತೆ ಇರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಮೊದಲನೇ ಪರೀಕ್ಷೆ ಎಲ್ಲರಿಗೂ ಕಡ್ಡಾಯವಾಗಿರಲಿದೆ. ಎರಡನೇ ಮತ್ತು ಮೂರನೇ ಪರೀಕ್ಷೆ ಉತ್ತಮ ಅಂಕ ಹೊಂದಲು ಮತ್ತು ಉತ್ತೀರ್ಣರಾಗಿ ಮುಂದಿನ ತರಗತಿಗೆ ಪ್ರವೇಶ ಪಡೆಯಲು ಅನುಕೂಲವಾಗಲೆಂದು ಈ ಪದ್ದತಿ ಜಾರಿಗೆ ತರಲಾಗಿದೆ. ಕಳೆದ ವರ್ಷ ಮೂರನೇ ಪರೀಕ್ಷೆಯಲ್ಲಿ ಹಾಜರಾದ 1.20 ಲಕ್ಷ ಮಕ್ಕಳಲ್ಲಿ 40 ಸಾವಿರ ಮಕ್ಕಳು ತೇರ್ಗಡೆಯಾಗಿ ಮುಂದಿನ ತರಗತಿಗೆ ಪ್ರವೇಶ ಪಡೆದಿದ್ದಾರೆ. ಇದರಿಂದ ಆ ಮಕ್ಕಳ ಒಂದು ವರ್ಷ ಉಳಿದಂತಾಗಿದೆ. ಇಲ್ಲದಿದ್ದರೆ ಆ ಮಕ್ಕಳ ಶಾಲೆಯಿಂದ ವಿಮುಖರಾರುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಮೂರು ಪರೀಕ್ಷೆ ಪದ್ದತಿಗೆ ಮಕ್ಕಳಿಂದಲೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪರೀಕ್ಷೆ ಕುರಿತಂತೆ ಸಚಿವರು ಸಮರ್ಥನೆ ಮಾಡಿಕೊಂಡರು.