ಬೆಂಗಳೂರು: ಪಿಯು ಮೌಲ್ಯಮಾಪಕರ ಬಾಕಿ ಶೀಘ್ರ ಬಿಡುಗಡೆ ಮಾಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ, ವಾರ್ಷಿಕ ಪರೀಕ್ಷೆ, ಪೂರಕ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯ ನಿರ್ವಹಿಸಿದ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳಿಗೆ ನೀಡಬೇಕಾಗಿರುವ ದಿನ ಭತ್ಯೆ, ಪ್ರಯಾಣ ಭತ್ಯೆ, ಮೌಲ್ಯಮಾಪನ ಸಂಭಾವನೆಯನ್ನು ಅಧಿವೇಶನ ಮುಗಿದ ಕೂಡಲೇ ಪಾವತಿಸುವುದಾಗಿ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಮಧು ಬಂಗಾರಪ್ಪ, 2022 -23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಭತ್ಯೆ, ಸಂಭಾವನೆ ನೀಡುವುದು ಬಾಕಿ ಉಳಿದಿದ್ದು, ಇದುವರೆಗೆ 6635 ಮೌಲ್ಯಮಾಪಕರಿಗೆ ಪ್ರಯಾಣ ಭತ್ಯೆ, 7507 ಮೌಲ್ಯಮಾಪಕರಿಗೆ ಸಂಭಾವನೆ ನೀಡಲಾಗಿದೆ. ಇನ್ನೂ ಸಾವಿರಾರು ಮೌಲ್ಯಮಾಪಕರು, ಸಿಬ್ಬಂದಿಗೆ ಭತ್ಯೆ ಮತ್ತು ಸಂಭಾವನೆ ನೀಡಬೇಕಿದ್ದು, ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.