ಬೆಂಗಳೂರು: ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದ ಮಧುಬಂಗಾರಪ್ಪ ಇವತ್ತು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.
ಕೆಲ ದಿನಗಳಿಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಚರ್ಚೆ ನಡೆದಿತ್ತು. ಶಿವಮೊಗ್ಗ ಮತ್ತು ಕರಾವಳಿ ಭಾಗದ ಜಿಲ್ಲೆಯಲ್ಲಿ ಮಧುಬಂಗಾರಪ್ಪ ಸೇರ್ಪಡೆಯಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿರುವ ನಾಯಕರು ಅವರ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಮಧುಬಂಗಾರಪ್ಪ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮೊದಲು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಜೆಡಿಎಸ್ ನಾಯಕರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ತಮಗೆ ಅವಕಾಶ ನೀಡಿದ್ದಾರೆ. ಆದರೆ ಪಕ್ಷದಲ್ಲಿನ ಕೆಲ ಬೆಳವಣಿಗೆಗಳಿಂದ ಬೇಸರವಾಗಿದೆ ಎಂದು ಅವರು ಹೇಳಿದ್ದರು. ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.