ಬೆಂಗಳೂರು: ಗೆಳೆಯರಾದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲ ಕೃಷ್ಣ ನಡುವೆ ಬಿರುಕು ಮೂಡಿದೆ.
ಮಧು ಬಂಗಾರಪ್ಪ ವಿರುದ್ಧ ಗೋಪಾಲಕೃಷ್ಣ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ನಾನು ಯಾರನ್ನೂ ಮುಂದಿಟ್ಟುಕೊಂಡು ಚುನಾವಣೆ ಗೆದ್ದು ಬಂದಿಲ್ಲ. ನನ್ನ ಸಾಮರ್ಥ್ಯ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಗೆಲ್ಲಿಸಿದ್ದು ಮಧು ಬಂಗಾರಪ್ಪ ಅವರಲ್ಲ ಎಂದು ಬೇಳೂರು ಗೋಪಾಲಕೃಷ್ಣ ಕಿಡಿ ಕಾರಿದ್ದಾರೆ.
ಮಾಜಿ ಸಿಎಂ, ಮಾಜಿ ಸಚಿವರ ಮಕ್ಕಳಿಗೆ ಅಧಿಕಾರ ನೀಡಿದರೆ ನಾವು ಏನು ಮಾಡಬೇಕು? ಜನಸಾಮಾನ್ಯರ ಮಕ್ಕಳಿಗೂ ಅಧಿಕಾರ ಸಿಗಬೇಕು. ಜನರ ಆಶೀರ್ವಾದದಿಂದ ಮೂರು ಬಾರಿ ಶಾಸಕನಾದವನಿಗೆ ಸಿಗದ ಸಚಿವ ಸ್ಥಾನ ಮಾಜಿ ಸಿಎಂ ಪುತ್ರ ಎನ್ನುವ ಕಾರಣಕ್ಕೆ ಮಧು ಬಂಗಾರಪ್ಪನವರಿಗೆ ಸಿಗುತ್ತದೆ. ನನ್ನಂತಹ ಸಾಮಾನ್ಯರ ಮಕ್ಕಳಿಗೂ ಅಧಿಕಾರ ಸಿಗಬೇಕು ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜಿಲ್ಲಾ ಪ್ರವಾಸ ಕೈಗೊಂಡಾಗ ಎಲ್ಲಿಗೂ ಕರೆಯುತ್ತಿಲ್ಲ. ನಾನು ಕೂಡ ಎಲ್ಲಿಗೂ ಹೋಗುತ್ತಿಲ್ಲ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ಗೆದ್ದು ಬಂದಿದ್ದೇನೆ. ಸಚಿವ ಸ್ಥಾನ ಸಿಗದೇ ಹೋದರೂ ಪರವಾಗಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನನಗೆ ಅರ್ಹತೆ ಇಲ್ಲವೇ? ಅರ್ಹತೆ, ಯೋಗ್ಯತೆ ನನಗಿದೆ. ಈ ಕಾರಣಕ್ಕೆ ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.