ಬೆಂಗಳೂರು: ಕಳೆದ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಮತ್ತೆ ಬರಗೂರು ರಾಮಚಂದ್ರಪ್ಪ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಮಾಹಿತಿ ಪಡೆದುಕೊಂಡ ಮಧು ಬಂಗಾರಪ್ಪ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪರಿಷ್ಕರಣೆ ಕುರಿತಾಗಿ ವಿಚಾರ ವಿನಿಮಯ ನಡೆಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಶಾಲೆಗಳು ಆರಂಭವಾಗಿರುವುದರಿಂದ ಪಠ್ಯಪುಸ್ತಕ ಕುರಿತಂತೆ ಗೊಂದಲ ಸೃಷ್ಟಿಯಾಗದಂತೆ, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗದ ರೀತಿಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಬರಗೂರು ರಾಮಚಂದ್ರಪ್ಪ ಸಚಿವರಿಗೆ ಸಲಹೆ ನೀಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕಗಳಿಂದ ಕೈಬಿಡಲಾದ ಮತ್ತು ಹೊಸದಾಗಿ ಸೇರಿಸಿದ ಪಾಠಗಳು, ತಿರುಚಿದ ಮತ್ತು ತಿದ್ದುಪಡಿ ಮಾಡಿದ ವಿಷಯಗಳ ಕುರಿತಾಗಿ ಚರ್ಚೆ ನಡೆಸಿದ್ದು, ಸೂಕ್ತ ವಿವರಣೆಯ ಬಳಿಕ ಬದಲಾವಣೆ ಮಾಡುವ ಕುರಿತಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.