ಶಿವಮೊಗ್ಗ: ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿರುವ ಶಾಲೆಗಳನ್ನು ವಿಲೀನಗೊಳಿಸುವ ಬಗ್ಗೆ ಶಾಸಕರು ಸಲಹೆ ನೀಡಿದ್ದು, ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು. ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ಶಿಕ್ಷಕರಿಗೆ ಕೆಲಸ ಇಲ್ಲದಂತಾಗುತ್ತದೆ. ಮಕ್ಕಳಿಗೂ ಶಾಲಾ ವಾತಾವರಣ ಹಿತಕರವಾಗಿರುವುದಿಲ್ಲ. ಹೀಗಾಗಿ ಸಾರಿಗೆ ವ್ಯವಸ್ಥೆ ಅನುಕೂಲ ಇರುವ ಕಡೆಗೆ ಕಡಿಮೆ ಮಕ್ಕಳ ಸಂಖ್ಯೆ ಇರುವ ಶಾಲೆಗಳನ್ನು ವಿಲೀನ ಮಾಡಿದಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಶಾಲೆಗಳ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಪಬ್ಲಿಕ್ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಶಿಕ್ಷಣ ನೀತಿ ಜಾರಿಗೆ ಸಿಎಂ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇಲಾಖೆಗೆ ಕೇಂದ್ರದ ಅನುದಾನ ಕೊರತೆ ಆಗದಂತೆ ಕೇಂದ್ರ ಸಚಿವರ ಭೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.