ಉತ್ತರ ಪ್ರದೇಶದಲ್ಲಿ ಉತ್ಪಾದಿಸುವ ಮದ್ಯವು ರಾಜ್ಯದ ಹೊರಗೆ ಅಪಾರ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದಲ್ಲಿ 2022-23ರಲ್ಲಿ ಉತ್ತರ ಪ್ರದೇಶದ ಮದ್ಯಕ್ಕಿರುವ ಬೇಡಿಕೆಯಲ್ಲಿ 23 ಪ್ರತಿಶತದಷ್ಟು ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತಿವೆ.
2021-22ರ ವಿತ್ತೀಯ ವರ್ಷದಲ್ಲಿ ಉ.ಪ್ರದಲ್ಲಿ ತಯಾರಿತವಾದ 7.74 ಲಕ್ಷ ಕೇಸುಗಳ ಮದ್ಯವು ವಿದೇಶದಲ್ಲಿ ಮಾರಾಟ ಕಂಡಿದ್ದರೆ, 2022-23ರ ಮೊದಲ ಒಂಬತ್ತು ತಿಂಗಳ ಅವಧಿಯಲ್ಲೇ 9.48 ಲಕ್ಷ ಕೇಸುಗಳನ್ನು ರಫ್ತು ಮಾಡಲಾಗಿತ್ತು.
ಭಾರತದಲ್ಲಿ ನಿರ್ಮಿತ ವಿದೇಶೀ ಮದ್ಯದ (ಐಎಂಎಫ್‌ಎಲ್) ಡಜ಼ನ್‌ಗೂ ಹೆಚ್ಚಿನ ಕಂಪನಿಗಳಿಗೆ ರಾಜ್ಯವು ತವರಿದ್ದರೂ ಸಹ ಮೋಹನ್ ಮೀಕಿನ್ ಹಾಗೂ ರ‍್ಯಾಡಿಕೀ ಖೆಯ್ತಾನ್‌ಗಳ ಮದ್ಯಕ್ಕೆ ಮಾತ್ರವೇ ಅಪಾರ ಪ್ರಮಾಣದಲ್ಲಿ ಬೇಡಿಕೆ ಇದೆ.
ಘಾಜ಼ಿಯಾಬಾದ್‌ನಲ್ಲಿರುವ ಮೋಹನ್ ಮೀಕಿನ್ ಉತ್ಪಾದಿಸುವ ಡಾರ್ಕ್ ರಮ್‌ಗೆ ವಿದೇಶಗಳಲ್ಲಿ ಒಳ್ಳೇ ಬೇಡಿಕೆ ಇದೆಯಂತೆ.
ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಫಿನ್ಲೆಂಡ್, ಸ್ವಿಜ಼ರ್ಲೆಂಡ್, ನಾರ್ವೇ, ನ್ಯೂಜ಼ೀಲೆಂಡ್, ರಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಪುರ, ಹಾಂಕಾಂಗ್, ಕೊಲ್ಲಿ ದೇಶಗಳು ಸೇರಿದಂತೆ 38 ದೇಶಗಳಲ್ಲಿ ಮೇಲ್ಕಂಡ ಕಂಪನಿಗಳ ಮದ್ಯಕ್ಕೆ ಬೇಡಿಕೆ ಇದೆ.