ಬೀದರ್: ಇನ್ಮುಂದೆ ರಾಜ್ಯದ ಮದರಸಾಗಳಲ್ಲಿ ವಾರದಲ್ಲಿ ಎರಡು ದಿನ ಕನ್ನಡ ಕಲಿಸುವ ಯೋಜನೆ ಜಾರಿಯಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಬೀದರ್ ಜಿಲ್ಲಾಡಳಿತ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಸಭೆ ಬಳಿಕ ಮಾತನಾಡಿದ ಪುರುಷೋತ್ತಮ, ಮದರಸಾಗಳಲ್ಲಿ ವಾರದಲ್ಲಿ ಎರಡು ದಿನ ಕನ್ನಡ ಕಲಿಕೆಗೆ ನಿರ್ಧರಿಸಲಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರು, ವಿಜಯಪುರ, ರಾಯಚೂರು, ಕಲಬುರ್ಗಿ ಜಿಲ್ಲೆಗಳ ಆಯ್ದ ಕೆಲ ಮದರಸಾಗಳಲ್ಲಿ ಆರಂಭಿಸಲಾಗುವುದು.ಸಾಧಕ-ಬಾಧಕ ನೋಡಿಕೊಂಡು ರಾಜ್ಯದ ಇತರೆ ಕಡೆಗಳಲ್ಲಿ ವಿಸ್ತರಿಸಲಾಗುವುದು ಎಂದರು.
ಭಾಷೆಯ ಅಂತರ ದೂರ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಅಲ್ಪಸಂಖ್ಯಾತ ಮುಸ್ಲಿಂರಿಂದಲೂ ಇದಕ್ಕಾಗಿ ಬೇಡಿಕೆ ಬಂದಿದೆ. ಈ ಬಗ್ಗೆ ಮದರಸಾ ನಡೆಸುತ್ತಿರುವ ಕೆಲ ವಿದ್ವಾಂಸರ ಜೊತೆ ಚರ್ಚಿಸಲಾಗಿದೆ. ಯಾವ ವಿಷಯ ಕಲಿಸಬೇಕು ಎಂಬ ಬಗ್ಗೆ ಯಾವುದೇ ಗೊಂದಲವಿಲ್ಲ. ಕಾರಣ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೇ ಪಠ್ಯ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.