ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ, ಬೆಂಗಳೂರು ಜಲ ಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರ ಖಾಸಗಿ ಕಚೇರಿಯಲ್ಲಿ 1.62 ಕೋಟಿ ರೂ. ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ.
ಇದಲ್ಲದೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಧಿಕಾರಿಗಳ ವಿರುದ್ಧ ಕೂಡ ಎಫ್ಐಆರ್ ದಾಖಲಿಸಲಾಗಿದೆ. ಕೆ.ಎಸ್.ಡಿ.ಎಲ್. ಕಚ್ಚಾ ವಸ್ತು ಖರೀದಿ ಟೆಂಡರ್ ಸಂಬಂಧ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಪ್ರಶಾಂತ್ ಮಾಡಾಳ್ ಅವರನ್ನು ಬಂಧಿಸಲಾಗಿದ್ದು, ಕೆ.ಎಸ್.ಡಿ.ಎಲ್. ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.
ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಪ್ರಶಾಂತ್ ಅವರ ಖಾಸಗಿ ಕಚೇರಿಯಲ್ಲಿ 1.62 ಕೋಟಿ ರೂ ನಗದು ಪತ್ತೆಯಾಗಿತ್ತು. ವಿರೂಪಾಕ್ಷಪ್ಪ ಅವರ ಮನೆಯಲ್ಲಿ 6.10 ಕೋಟಿ ರೂ. ನಗದು ವಶಕ್ಕೆ ಪಡೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಹೊಸ ಪ್ರಕರಣ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ. ಶಾಸಕರಿಂದ ಹೇಳಿಕೆ ದಾಖಲಿಸಿಕೊಂಡ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಮಾಡಾಳ್ ವಿರೂಪಾಕ್ಷಪ್ಪ ಕೆ.ಎಸ್.ಡಿ.ಎಲ್. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರಿ ಅಕ್ರಮ ನಡೆದಿರುವುದಾಗಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ದೂರು ಸಲ್ಲಿಸಿದ್ದು, ಇದನ್ನು ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಪ್ರತ್ಯೇಕ ವಿಚಾರಣೆ ಕೈಗೊಂಡಿದ್ದಾರೆ.