ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ದಾವಣಗೆರೆ ಜಿಲ್ಲೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಿದ್ದಾರೆ. ಬಂಧನದ ನಂತರ ನನಗೆ ಎದೆ ನೋವು ಬರ್ತಿದೆ ಎಂದು ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.
ನಿನ್ನೆ ಹೈಕೋರ್ಟ್ ಏಕ ಸದಸ್ಯ ಪೀಠದಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುತ್ತಿದ್ದಂತೆ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದರು. ತುಮಕೂರಿನ ಕ್ಯಾತ್ಸಂದ್ರ ಬಳಿ ಅವರನ್ನು ಬಂಧಿಸಲಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಈ ವೇಳೆ ಹೈಡ್ರಾಮಾ ನಡೆಸಿದ ವಿರೂಪಾಕ್ಷಪ್ಪ ಎದೆ ನೋವು ಇದೆ ಎಂದು ಹೇಳಿದ್ದು, ವೈದ್ಯರ ಸಲಹೆ ಮೇರೆಗೆ ವಿರೂಪಾಕ್ಷಪ್ಪ ಅವರನ್ನು ಜಯದೇವ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಸದ್ಯ ಲೋಕಾಯುಕ್ತ ಕಚೇರಿಯಲ್ಲೇ ಇರುವ ವಿರೂಪಾಕ್ಷಪ್ಪ ಅವರನ್ನು ಪೊಲೀಸರು ಇಂದು ಕೋರ್ಟ್ ಗೆ ಹಾಜರುಪಡಿಸಲಾಗುವುದು.
ರಾತ್ರಿಯೇ ಬಂಧನ ಪ್ರಕ್ರಿಯೆ ಮುಗಿಸಿದ ಲೋಕಾಯುಕ್ತ ಪೊಲೀಸರು ಇಂದು ಕೋರ್ಟ್ ಗೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಲಿದ್ದು, ಕಸ್ಟಡಿಗೆ ನೀಡಿದಲ್ಲಿ ಲೋಕಾಯುಕ್ತ ಕಚೇರಿಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಹೇಳಲಾಗಿದೆ.