ಮಂಗಳೂರು: ಸುಧೀರ್ಘ ಮೂರು ತಿಂಗಳ ಕಾಲ ಲೋಕಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವುದನ್ನು ನೋಡಿದರೆ ಇದರ ಹಿಂದೆ ಕೇಂದ್ರ ಸರ್ಕಾರದ ಕುತಂತ್ರ ಅಡಗಿರುವ ಸಂದೇಹ ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.
ಈ ಕುರಿತಾಗಿ ಪ್ರಧಾನಮಂತ್ರಿ, ಚುನಾವಣಾ ಆಯುಕ್ತರು ಸ್ಪಷ್ಟನೆ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಈ ಹಿಂದೆ 20 ದಿನಗಳ ಒಳಗೆ ಚುನಾವಣೆ ನಡೆದ ಇತಿಹಾಸವಿದೆ. ಈಗ ತಂತ್ರಜ್ಞಾನ ಸಾಕಷ್ಟು ಬೆಳೆದಿರುವ ಕಾಲದಲ್ಲಿ ಚುನಾವಣೆ ಬೇಗನೆ ಮುಗಿಯಬೇಕಿತ್ತು. ಆದರೆ, ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಗಮನಿಸಿದರೆ ಇದರ ಹಿಂದೆ ಕೇಂದ್ರ ಸರ್ಕಾರದ ಕುತಂತ್ರ ಅಡಗಿರುವ ಸಂದೇಹ ಕಾಡುತ್ತಿದೆ. ಒಂದು ದೇಶ ಒಂದು ಚುನಾವಣೆ ಎನ್ನುವ ಬಿಜೆಪಿ ಅಜೆಂಡಾಗೆ ಮುಂದಿನ ಚುನಾವಣೆಯಲ್ಲಿ ನಾಂದಿ ಹಾಡುವ ಗುಮಾನಿ ಇದೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ವಿಳಂಬವಾದಷ್ಟು ಹಸ್ತಕ್ಷೇಪಕ್ಕೆ ಅವಕಾಶ ಹೆಚ್ಚಾಗುತ್ತದೆ. ಸಂವಿಧಾನದ ಆಶಯಗಳಿಗೆ ಧಕ್ಕೆ ಆಗಬಹುದು. ಹೀಗಾಗಿ ಪ್ರಧಾನಿ ಮತ್ತು ಚುನಾವಣಾ ಆಯುಕ್ತರು ಸುದೀರ್ಘ ಚುನಾವಣೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.