ಬೆಂಗಳೂರು: ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ’ಆಪರೇಷನ್ ಹಸ್ತ’ ವಿಚಾರವಾಗಿ ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲೇ ರೇಣುಕಾಚಾರ್ಯ, ಸಿಎಂ ಸಿದ್ದರಾಮಯ್ಯ ಭೇಟಿ ಅಚ್ಚರಿಗೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನೂ ರೇಣುಕಾಚಾರ್ಯ ಭೇಟಿಯಾಗಲಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಬರದ ವಿಚಾರವಾಗಿ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಭೇಟಿಯಾಗಿದ್ದೇನೆ. ಇಂದು ವರಮಹಾಲಕ್ಷ್ಮೀ ಹಬ್ಬ ಹಾಗಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕೃಷ್ಣಬೈರೇಗೌಡ ಅವರನ್ನೂ ಭೇಟಿಯಾಗಿದ್ದೇನೆ ಎಂದಿದ್ದಾರೆ.
ರಾಜಕೀಯವೇ ಬೇರೆ ಪರಸ್ಪರ ವಿಶ್ವಾಸವೇ ಬೇರೆ. ರಾಜಕಿಯೇತರ ಹಲವು ವಿಚಾರಗಳನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿದ್ದೇನೆ. ಅವರು ಕೂಡ ನನ್ನನ್ನು ಪಕ್ಷ ಸೇರ್ಪಡೆಯಾಗುವಂತೆ ಆಹ್ವಾನಿಸಿಲ್ಲ. ನಾನು ಕೂಡ ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.