ದಾವಣಗೆರೆ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಸ್ವಪಕ್ಷದ ನಾಯಕರ ವಿರುದ್ಧವೇ ಕೆಂಡ ಕಾರುತ್ತಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇದೀಗ ಮಾಜಿ ಶಾಸಕ ಸಿ.ಟಿ.ರವಿ ವಿರುದ್ಧ ಗುಡುಗಿದ್ದಾರೆ.
ರೆಣುಕಾಚಾರ್ಯ ನಾಟ್ ರೀಚೆಬಲ್ ಆಗಿದ್ದಾರೆ ಎಂಬ ಸಿ.ಟಿ.ರವಿ ಹೇಳಿಕೆಗೆ ಕಿಡಿಕಾರಿರುವ ಎಂ.ಪಿ.ರೇಣುಕಾಚಾರ್ಯ, ನಾನು ಸಣ್ಣ ಮಗುವಲ್ಲ ಹೋರಾಟ ಮತ್ತು ಸಂಘಟನೆಯಿಂದ ಬಂದವನು. ಮಾಜಿ ಶಾಸಕ ಸಿ.ಟಿ.ರವಿ ಮಾತನಾಡುವ ಮುನ್ನ ವಿಚಾರ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಾನು ಮಾಜಿ ಸಿಎಂ ಯಡಿಯೂರಪ್ಪನವರ ಆಶ್ರಯದಲ್ಲಿ ಬೆಳೆದವನು. ಭಾರತೀಯ ಜನತಾ ಪಕ್ಷದ ಕಟ್ಟಾಳು. ನಿನ್ನೆ ಮೊನ್ನೆ ಬಂದವರು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಇದೇ ವೇಳೆ ಪರಿಷತ್ ಸದಸ್ಯ ನವೀನ್ ವಿರುದ್ಧವೂ ಕಿಡಿಕಾರಿದ ರೇಣುಕಾಚಾರ್ಯ, ಯಾರೋ ಈಗ ಬಂದು ಹೇಳಿಕೆ ನೀಡಿದರೆ ಸುಮ್ಮನಿರಲ್ಲ. ನಾನು ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.