ದಾವಣಗೆರೆ: ಹಿಜಾಬ್ ನಿಷೇಧ ಆದೇಶ ವಾಪಾಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ನೇತೃತ್ವದ ತುಘಲಕ್ ಸರ್ಕಾರವಿದೆ ಎಂದು ಗುಡುಗಿದ್ದಾರೆ.
ಹಿಜಾಬ್ ಗೆ ಅವಕಾಶ ನೀಡಿದ್ರೆ ಕೇಸರಿ ಶಾಲು ಹಾಕಲು ಅವಕಾಶ ಕೊಡಲಿ. ಹಿಜಾಬ್ ನಿಷೇಧ ಆದೇಶ ವಾಪಾಸ್ ಪಡೆದರೆ ಕೇಸರಿ ಶಾಲು ಹಾಕಿಕೊಳ್ಳುವಂತೆ ಹಿಂದೂ ಯುವಕರಿಗೆ ನಾವೇ ಕರೆ ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯ 13 ಬಾರಿ ಬಜೆಟ್ ಮಂಡಿಸಿದ್ದಾರೆ. ಅನುಭವಿ ರಾಜಕಾರಣಿ ಇದ್ದಾರೆ. ಈಗ ಇಂತಹ ಹೇಳಿಕೆ ನೀಡುವ ಮೂಲಕ ಸಂಘರ್ಷಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಎಲ್.ಕೆ.ಜಿಯಿಂದ ಕಾಲೇಜಿನವರೆಗೂ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಹೀಗಿರುವಾಗ ಸಿಎಂ ಶಾಲೆಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಲು ಹೊರಟಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.