
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು, ಪದಾಧಿಕಾರಿಗಳಿಗೆ ಆಯೋಜಿಸಿದ್ದ ಔತಣಕೂಟಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೈರಾಗಿರುವ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದಕ್ಕೆ ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಬೇಡ. ಗೃಹ ಸಚಿವ ಪರಮೇಶ್ವರ್ ಹೊರತುಪಡಿಸಿ ಎಲ್ಲರೂ ಭಾಗಿಯಾಗಿದ್ದರು. ಪರಮೇಶ್ವರ್ ಅವರ ಹತ್ತಿರದ ಸಂಬಂಧಿಯೊಬ್ಬರು ಸಾವನ್ನಪ್ಪಿದ್ದ ಕಾರಣಕ್ಕೆ ಅವರು ಅಲ್ಲಿಗೆ ಹೋಗಬೇಕಾಗಿತ್ತು. ಹಾಗಾಗಿ ಪರಮೇಶ್ವರ್ ಔತಣಕೂಟದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಡಿನ್ನರ್ ಕೂಟದಲ್ಲಿ ಸತೀಶ್ ಜಾರಕಿಹೊಳಿ, ರಾಜಣ್ಣ ಭಾಗಿಯಾಗಿಲ್ಲ ಎಂಬ ಸುದ್ದಿ ಸುಳ್ಳು. ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಎಲ್ಲರೂ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ನಾನು ಹೀಗೆ ಎಲ್ಲರೂ ಭಾಗಿಯಾಗಿದ್ದೇವೆ. ಪರಮೇಶ್ವರ್ ಅವರು ಅವರ ಆತ್ಮೀಯರ ಅಗಲಿಕೆ ಕಾರಣಕ್ಕೆ ಬರಲು ಸಾಧ್ಯವಾಗಿಲ್ಲ. ಅವರೇ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಹೀಗಿರುವಾಗ ಅನಗತ್ಯವಾಗಿ ಇಲ್ಲದ ಚರ್ಚೆ ಹುಟ್ಟುಹಾಕುವುದು ಬೇಡ ಎಂದು ಹೇಳಿದರು.