ಎರಡು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಐಷಾರಾಮಿ ಗಂಗಾ ವಿಲಾಸ್ ಕ್ರೂಸ್ ಗೆ ಚಾಲನೆ ನೀಡಿದ್ದು, ಇದು ವಿಶ್ವದ ಅತಿ ಉದ್ದದ ನದಿ ಪ್ರವಾಸ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 51 ದಿನಗಳಲ್ಲಿ, ಐವತ್ತಕ್ಕೂ ಅಧಿಕ ಆಕರ್ಷಕ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುತ್ತಿದ್ದು, ಗಂಗಾ, ಬ್ರಹ್ಮಪುತ್ರ ಸೇರಿದಂತೆ 27 ನದಿಗಳನ್ನು ಇದು ಹಾದು ಹೋಗಲಿದೆ.
ಈ ಐಷಾರಾಮಿ ಹಡಗಿನಲ್ಲಿ ಒಂದು ಬಾರಿಗೆ 36 ಪ್ರವಾಸಿಗರು ಮಾತ್ರ ಪ್ರಯಾಣಿಸಬಹುದಾಗಿದ್ದು, ಪ್ರಯಾಣಿಕರಿಗೆ 55 ಲಕ್ಷ ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಗಂಗಾ ವಿಲಾಸ್ ಕ್ರೂಸ್ ನಲ್ಲಿ 18 ಸೂಟ್ ಗಳಿದ್ದು, ಮೂರು ಡೆಕ್ ಗಳನ್ನು ಹೊಂದಿದೆ. ಅಲ್ಲದೆ ಮುಂದಿನ ವರ್ಷದ ಮಾರ್ಚ್ ವರೆಗೂ ಈಗಾಗಲೇ ಬುಕಿಂಗ್ ಆಗಿದೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಸಮಾಜವಾದಿ ಪಕ್ಷದ ಮುಖಂಡ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುತರ ಆರೋಪವೊಂದನ್ನು ಮಾಡಿದ್ದಾರೆ. ಗಂಗಾ ವಿಲಾಸ್ ಕ್ರೂಸ್ ನಲ್ಲಿ ಪ್ರವಾಸಿಗರಿಗೆ ಮದ್ಯ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದ್ದು, ಪವಿತ್ರ ಗಂಗಾ ನದಿಯ ಮೇಲೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಾನು ಗಂಗಾ ವಿಲಾಸ್ ಕ್ರೂಸ್ ನಲ್ಲಿ ಪ್ರಯಾಣಿಸಿಲ್ಲ. ಈ ಕುರಿತು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರೇ ಉತ್ತರ ನೀಡಬೇಕು ಎಂದು ಹೇಳಿರುವ ಅಖಿಲೇಶ್ ಯಾದವ್, ಹಳೆ ಯೋಜನೆಗಳನ್ನು ತಮ್ಮದೆಂದು ಹೇಳಿಕೊಳ್ಳುವ ಬಿಜೆಪಿ ನಾಯಕರು ಇಲ್ಲಿಯೂ ಅದನ್ನು ಮುಂದುವರಿಸಿದ್ದಾರೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ.
ಕಳೆದ 17 ವರ್ಷಗಳಿಂದಲೂ ಈ ಹಡಗು ಸಂಚರಿಸುತ್ತಿದ್ದು, ಆದರೆ ಇದಕ್ಕೆ ಒಂದಷ್ಟು ನವೀಕರಣ ಮಾಡಿ ನಮ್ಮ ಸರ್ಕಾರ ಆರಂಭಿಸಿದೆ ಎಂದು ಕೇಂದ್ರ ಹೇಳುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಕಾರಣ ಬಿಜೆಪಿ ನಾಯಕರು ಈ ಗಿಮಿಕ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.